ನಾಳೆಯಿಂದ ರಾಜ್ಯ ಮಟ್ಟದ ಸಿಪಿಐ(ಎಂ) ಸಮಾವೇಶ

ತುಮಕೂರು, ಸೆ. ೧೭- ಭಾರತ ಕಮ್ಯೂನಿಸ್ಟ ಪಕ್ಷ (ಮಾರ್ಕ್ಸವಾದಿ) ರಾಜ್ಯ ಸಮಿತಿಯು ರಾಜ್ಯ ಮಟ್ಟದ ರಾಜಕೀಯ ಸಮಾವೇಶವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸೆ. ೧೮ ರಂದು ಆಯೋಜಿಸಿದೆ.
ಕೇಂದ್ರ – ರಾಜ್ಯ ಸರ್ಕಾರಗಳು ನಿರಂತರವಾಗಿ ಜನತೆಯ ಮೇಲೆ ನಡೆಸುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ದೇಶದ ಪರ್ಯಾಯ ಜನಪರ ನೀತಿಗಳಿಗಾಗಿ ಈ ಸಮಾವೇಶವನ್ನು ಸಂಘಟಿಸಲಾಗುತ್ತಿದೆ ಎಂದು ಸೈಯದ್ ಮುಜೀಬ್ ಹೇಳಿದರು.
ನಿರಂತರವಾಗಿ ಬೆಲೆ ಏರಿಕೆಯ ಹಣದುಬ್ಬರ, ಭ್ರಷ್ಟಾಚಾರ ದಂಧೆಯಲ್ಲಿ ತೊಡಗಿರುವ ಸರ್ಕಾರಗಳು ಜನತೆಯ ಸಂಕಷ್ಟಗಳನ್ನು ಬಗೆಹರಿಸದೆ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಕಂಡರೂ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ ಕಂಪೆನಿಗಳಿಗೆ ಲಾಭ – ಜನತೆಗೆ ಕಷ್ಟವನ್ನು ನೀಡುತ್ತಿದೆ. ಆಹಾರ ಧಾನ್ಯಗಳ ಮೇಲೆ ಜಿ.ಎಸ್.ಟಿ. ಮೂಲಕ ಜನತೆಗೆ ಬರೆ ಎಳೆದಿರುವ ಸರ್ಕಾರ ವಸೂಲಾಗದ ಸಾಲ ಲಕ್ಷಾಂತರ ಕೋಟಿಗಳನ್ನು ವಸೂಲು ಮಾಡುವುದಿರಲಿ ಸಾಲ ಪಡೆದವರ ಹೆಸರುಗಳನ್ನು ಬಹಿರಂಗಪಡಿಸಲು ತಯಾರಿಲ್ಲದೆ ಬಂಡವಾಳಶಾಹಿ ವಂಚಕರನ್ನು ಸಂರಕ್ಷಿಸುತ್ತಿದೆ, ಇದನ್ನು ಪಕ್ಷ ಖಂಡಿಸುತ್ತದೆ ಎಂದರು.
ಸಮಾವೇಶವನ್ನು ಕೇರಳ ರಾಜ್ಯದ ಮುಖ್ಯಮಂತ್ರಿಗಳು ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯರಾದ ಕಾಂ. ಪಿಣರಾಯ್ ವಿಜಯನ್ ಉಧ್ಘಾಟಿಸುವರು. ಕೇರಳದ ಮಾಜಿ ಶಿಕ್ಷಣ ಸಚಿವರು, ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯರಾದ ಕಾಂ. ಎಂ.ಎ. ಬೇಬಿ, ಮತ್ತೊಬ್ಬ ಪಾಲಿಟ್ ಬ್ಯೂರೋ ಸದಸ್ಯರಾದ ಕಾಂ. ಬಿ.ವಿ. ರಾಘವಲು, ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಕಾಂ. ಯು. ಬಸವರಾಜು, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಿ.ಸಿ. ಬಯ್ಯಾರೆಡ್ಡಿ, ಡಾ. ಕೆ. ಪ್ರಕಾಶ್, ಮೀನಾಕ್ಷಿ ಸುಂದರಂ, ಕೆ. ನೀಲಾ, ಕೆ.ಎನ್. ಉಮೇಶ್, ಎಸ್. ವರಲಕ್ಷ್ಮಿ, ಸೈಯ್ಯದ್ ಮುಜೀಬ್. ಗೋಪಾಲಕೃಷ್ಣ ಅರಳಹಳ್ಳಿ, ಯಾದವ ಶೆಟ್ಟಿ, ಜಿ. ನಾಗರಾಜು ಅವರು ಭಾಗವಹಿಸಲಿದ್ದಾರೆ.
ಸಮಾವೇಶದ ಅಧ್ಯಕ್ಷತೆಯನ್ನು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ. ಮುನಿವೆಂಕಟಪ್ಪ ಅವರು ವಹಿಸಲಿದ್ದಾರೆ. ಈ ಸಮಾವೇಶಕ್ಕೆ ರಾಜ್ಯ ವಿವಿಧ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದು, ಜಿಲ್ಲೆಯಿಂದ ಒಂದು ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಜನತೆಯ ಸಂಕಷ್ಟಗಳನ್ನು ಬಗೆಹರಿಸದೆ, ಭಷ್ಟಾಚಾರದಲ್ಲಿ ತುಂಬಿ ತುಳುಕುತ್ತಿರುವ ರಾಜ್ಯ ಸರ್ಕಾರ ಮಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸುತ್ತಿಲ್ಲ. ದುಡಿಯು ಜನತೆಗೆ ಬದುಕಲು ಯೋಗ್ಯ ಕನಿಷ್ಟ ಕೂಲಿ ನಿಗದಿ ಮಾಡುತ್ತಿಲ್ಲ. ಲಂಚ ಪಡೆದ ಶಾಸಕರು, ಸಚಿವರು, ರಾಜಾರೋಷವಾಗಿ ಇರುವುದು ನೋಡಿದರೆ ಲಚ್ಚೆಗಟ್ಟ ಸರ್ಕಾರ ಎಂಬುದು ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದರು.
ಜನತೆ ಐಕ್ಯತೆಯನ್ನು ಹೊಡೆಯುವ ಶಕ್ತಿಗಳಿಗೆ ಬೆಂಬಲವಾಗಿ ನಿಲ್ಲುವ ಸರ್ಕಾರ ಅಮಾಯಕ ಯುವ ಜನರಿ ಹೆಣಗಳ ಮೇಲೆ ತನ್ನ ರಾಜಕೀಯ ಬೇಳೆ ಬೇಯಿಸುತ್ತಿದೆ. ಉದ್ಯೋಗ ಸೃಷ್ಟಿಯಲ್ಲಿ ಸೋತಿರುವ ಸರ್ಕಾರ, ಖಾಲಿ ಇರುವ ಉದ್ಯೋಗಗಳನ್ನು ಭರ್ತಿಗೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಿಪಿಐ(ಎಂ) ಕಾರ್ಯದರ್ಶಿ ಮಂಡಳಿ ಸದಸ್ಯ ಬಿ. ಉಮೇಶ್, ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಉಪಸ್ಥಿತರಿದ್ದರು.