ನಾಳೆಯಿಂದ ರಾಜ್ಯಾದ್ಯಂತ ಶಾಲೆಗಳು ಆರಂಭ

ಮಕ್ಕಳ ಸ್ವಾಗತಕ್ಕೆ ಸಿದ್ಧತೆ
ಬೆಂಗಳೂರು, ಮೇ ೩೦-ಬೇಸಿಗೆಯ ರಜೆಯ ಮಜಾ ಮುಗಿದಿದ್ದು, ಇಂದಿನಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಮಕ್ಕಳು ಶಾಲೆಗಳತ್ತ ಮುಖ ಮಾಡಲು ಸಜ್ಜಾಗಿದ್ದಾರೆ. ಮಕ್ಕಳಿಗೆ ಸ್ವಾಗತ ಕೋರಲು ರಾಜ್ಯದ ಎಲ್ಲ ಶಾಲೆಗಳಲ್ಲಿ ಸಕಲ ಸಿದ್ಧತೆಗಳು ಆರಂಭವಾಗಿವೆ.
ಇಂದಿನಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಆದರೆ, ಶಾಲೆ ಆರಂಭಕ್ಕೆ ಇನ್ನೂ ಎರಡು ದಿನ ಕಾಲಾವಕಾಶ ನೀಡಲಾಗಿದ್ದು, ಮೇ ೩೧ರಂದು ರಾಜ್ಯಾದ್ಯಂತ ಎಲ್ಲ ಶಾಲೆಗಳು ಒಂದೇ ಬಾರಿಗೆ ಆರಂಭವಾಗಲಿವೆ. ಇಂದಿನಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಶಾಲೆಗಳಿಗೆ ಆಗಮಿಸಿ ಶಾಲೆ ಆರಂಭಕ್ಕೆ ಸಿದ್ಧತೆ ಆರಂಭಿಸಿದ್ದಾರೆ.ಇದೇ ಮೊದಲ ಬಾರಿಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ರವಾನಿಸಲಾಗಿದ್ದು, ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳ ಕೊರತೆಯಾಗದಂತೆ ವಿತರಣೆಗೆ ಅಗತ್ಯ ಕ್ರಮ ವಹಿಸುವಂತೆ ಹಾಗೂ ಬಿಸಿಯೂಟವನ್ನು ಮೊದಲ ದಿನದಿಂದಲೇ ಆರಂಭಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ವಿವರ ಹೀಗಿದೆ. ಮೊದಲನೇ ಅವಧಿಯ ಶಾಲಾ ಕರ್ತವ್ಯ ದಿನಗಳು:೨೯-೦೫-೨೦೨೩ ರಿಂದ ದಿನಾಂಕ ೦೨-೧೦-೨೦೨೩ರ ವರೆಗೆ ಎರಡನೇ ಅವಧಿಯ ಶಾಲಾ ಕರ್ತವ್ಯ ದಿನಗಳು : ದಿನಾಂಕ ೨೫-೧೦-೨೦೨೩ ರಿಂದ ದಿನಾಂಕ ೧೦-೦೪-೨೦೨೪ರವರೆಗೆ,
ದಸರಾ ರಜೆ : ೦೮-೧೦-೨೦೨೩ ರಿಂದ ದಿನಾಂಕ ೨೪-೧೦-೨೦೨೩ರ ವರೆಗೆ ಬೇಸಿಗೆ ರಜೆ : ೧೧-೦೪-೨೦೨೪ ರಿಂದ ದಿನಾಂಕ ೨೮-೦೫-೨೦೨೪ರ ವರೆಗೆ.ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ೨೦೨೩-೨೪ನೇ ಶೈಕ್ಷಣಿಕ ವರ್ಷದಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಅಧಿವೇಶನ, ರಜಾದಿನಗಳು ಮತ್ತು ವಾರ್ಷಿಕ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದೆ. ರಾಜ್ಯ ಪಠ್ಯಕ್ರಮವನ್ನು ಎಲ್ಲಾ ಶಾಲೆಗಳಲ್ಲಿ ಜಾರಿಗೊಳಿಸಬೇಕು ಮತ್ತು ಜಾರಿಗೊಳಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆಯಲ್ಲಿ ಘೋಷಿಸಿದೆ.ಇಷ್ಟು ದಿನ ಬೇಸಿಗೆ ರಜೆಯನ್ನು ಸವಿಯುತ್ತಿದ್ದ ಮಕ್ಕಳು ಈಗ ಆಟದಿಂದ ಪಾಠದತ್ತ ಮುಖ ಮಾಡುತ್ತಿದ್ದಾರೆ. ಶಾಲಾ ಬ್ಯಾಗ್ ಗಳು ಸಿದ್ಧವಾಗಿದ್ದು, ಇನ್ನೆರಡು ದಿನಗಳಲ್ಲಿ ಮಕ್ಕಳು ಹೊಸ ಪುಸ್ತಕಗಳೊಂದಿಗೆ ಶಾಲೆಗಳಿಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಬಿಇಒ ಕಚೇರಿ ಪಠ್ಯ ಪುಸ್ತಕಗಳು : ಮಕ್ಕಳಿಗಾಗಿ ಬಿಸಿಊಟದ ವ್ಯವಸ್ಥೆ ಕೂಡ ಆಗಿದೆ. ಹಾಲಿನ ಪುಡಿ ಈಗಾಗಲೇ ಎಲ್ಲಾ ಶಾಲಾ ಕೇಂದ್ರಗಳಿಗೆ ತಲುಪಿದ್ದು, ಜಿಲ್ಲೆಯಲ್ಲಿ ಮಕ್ಕಳಿಗೆ ೧೫,೫೪,೩೧೬ ಪಠ್ಯಪುಸ್ತಕಗಳನ್ನು ವಿತರಣೆ ಮಾಡಬೇಕಾಗಿದೆ. ಇನ್ನು ಇದರಲ್ಲಿ ಉಚಿತ ವಿತರಣೆ ೧೧,೧೮,೩೦೩ ಹಾಗೂ ಮಾರಾಟದ ೪,೩೬,೦೧೩ ಪುಸ್ತಕಗಳಿದ್ದು, ಆಯಾ ಬಿಇಒ ಕಚೇರಿಗಳಿಗೆ ರವಾನಿಸಲಾಗಿದೆ. ಮೇ ೩೧ ರಂದು ಶಾಲೆಗಳಲ್ಲಿ ಮಕ್ಕಳಿಗೆ ಸಮವಸ್ತ್ರ ಮತ್ತು ಸಿಹಿ ಊಟದೊಂದಿಗೆ ಶಾಲೆಗೆ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತ ನೀಡಲಾಗುವುದೆಂದು ಡಿಡಿಪಿಐ ಜಿ.ಆರ್. ತಿಪ್ಪೇಸ್ವಾಮಿಯವರು ಮಾಹಿತಿ ನೀಡಿದರು.