ನಾಳೆಯಿಂದ ಮೂರು ದಿನ ಸಂಪೂರ್ಣ ಲಾಕ್ ಡೌನ್ : ಮದ್ಯ ಖರೀದಿಗೆ ಮುಗಿಬಿದ್ದ ಜನ

  • ವೈದ್ಯಕೀಯ, ಪೆಟ್ರೋಲ್ ಬಂಕ್ ಮಾತ್ರ ಕಾರ್ಯ – ಉಳಿದೆಲ್ಲವೂ ಸ್ತಬ್ಧ
    ರಾಯಚೂರು.ಮೇ.೧೫- ಕೊರೊನಾ ಮಹಾಮಾರಿಯ ಸ್ಪೋಟದ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನ ಸುಮಾರು ೭೨ ಘಂಟೆಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದ್ದು, ಪಾನಪ್ರೀಯರು ಮದ್ಯಕ್ಕಾಗಿ ಇಂದು ಬಾರ್ ಶಾಪ್‌ಗಳಿಗೆ ಮುಗಿಬಿದ್ದು ಖರೀದಿಸಿದರು.
    ಜಿಲ್ಲೆಯಲ್ಲಿ ನಿನ್ನೆ ೧೦೬೩ ಕೊರೊನಾ ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ ಮತ್ತು ದಿನೇ ದಿನೇ ಕೊರೊನಾ ಹರಡುವಿಕೆ ತೀವ್ರತೆಯಿಂದಾಗಿ ನಾಳೆಯಿಂದ ಮೂರು ದಿನಗಳ ಲಾಕ್ ಡೌನ್‌ಗೆ ನಿರ್ಧರಿಸಲಾಗಿದೆ. ವೈದ್ಯಕೀಯ ಸೇವೆ ಮತ್ತು ಪೆಟ್ರೋಲ್ ಬಂಕ್ ಹೊರತು ಪಡಿಸಿದರೇ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗುತ್ತದೆ. ಅಗತ್ಯ ವಸ್ತುಗಳ ಖರೀದಿಗೂ ಅವಕಾಶವಿಲ್ಲದಂತೆ ನಿರ್ಬಂಧಿಸಲಾಗಿದೆ. ಇಲ್ಲಿವರೆಗೂ ಲಾಕ್ ಡೌನ್ ಇದ್ದರೂ, ಬೆಳಗಿನ ಜಾವ ೬ ಗಂಟೆಯಿಂದ ೧೦ ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು.
    ಆದರೆ, ನಾಳೆಯಿಂದ ಯಾವುದೇ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರುವುದಿಲ್ಲ. ೭೨ ಗಂಟೆಗಳ ಕಾಲ ಜನ ಮನೆಯಲ್ಲಿಯೇ ಉಳಿದು ಕೊರೊನಾ ಸರಪಳಿಯನ್ನು ತಡೆಯಬೇಕಾಗಿದೆ. ಮೂರು ದಿನಗಳ ಬಂದ್ ಹಿನ್ನೆಲೆಯಲ್ಲಿ ಇಂದು ಜನರು ಅತಿಯಾಗಿ ರಸ್ತೆಯಲ್ಲಿ ಓಡಾಡಿ, ಅಗತ್ಯ ವಸ್ತುಗಳನ್ನು ಖರೀದಿಸಿದ್ದರಿಂದ ಅನೇಕ ಕಡೆ ಮುಂಜಾನೆ ಟ್ರಾಫಿಕ್ ಜಾಮ್ ತೀವ್ರವಾಗಿತ್ತು. ಮೂರು ದಿನಗಳ ಬಂದ್ ಹಿನ್ನೆಲೆಯಲ್ಲಿ ಜನ ಯಾವುದೇ ಮುನ್ನೆಚ್ಚರಿಕೆ ಅನುಸರಿಸದೇ, ಇಂದು ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ತೀರುಗಾಡುವಂತಹ ಪ್ರಸಂಗ ಕಂಡು ಬಂದಿತು.
    ಪೊಲೀಸರು ಜನರ ಓಡಾಟ ಎಷ್ಟೇ ನಿರ್ಬಂಧಿಸಿದರೂ, ಅಲ್ಲಲ್ಲಿ ನುಸುಳಿಕೊಂಡು ಓಡಾಟ ನಡೆಸಿದರು. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಜನ ಈ ಬಗ್ಗೆ ಜಾಗೃತರಾಗಿ ಕನಿಷ್ಟ ಇದನ್ನು ತಡೆಯುವ ಮುಂಜಾಗ್ರತೆಗಾಗಿ ಮನೆಯಲ್ಲಿ ಉಳಿಯದಿರುವುದು ಕೊರೊನಾ ನಿಯಂತ್ರಣಕ್ಕೆ ಬಹುದೊಡ್ಡ ಅಡ್ಡಿಯಾಗಿದೆ. ಜನರ ಓಡಾಟದ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನಗಳ ಈ ನಿರ್ಬಂಧವೇರಲಾಗಿದೆ. ಆದರೆ, ಪಾನ ಪ್ರೀಯರು ಇಂದು ಐಎಸ್‌ಐಎಲ್ ಮತ್ತು ಇತರೆ ಬಾರ್ ಶಾಪ್‌ಗಳಲ್ಲಿ ಮುಗಿಬಿದ್ದು, ಮೂರು ದಿನಕ್ಕೆ ಬೇಕಾದ ಮದ್ಯ ಖರೀದಿಸಿದರು. ಸಾಮಾಜಿಕ ಅಂತರ ಮಾಸ್ಕ್ ಧಾರಣೆ ಎಲ್ಲವೂ ಅಯೋಮಯವಾಗಿತ್ತು.