ನಾಳೆಯಿಂದ ಮಹಾ ರಾತ್ರಿ ಕರ್ಫ್ಯೂ

ಮುಂಬೈ, ಮಾ.೨೭-ಕೋವಿಡ್-೧೯ ಪ್ರಕರಣಗಳು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುತ್ತಾ ಕ್ಷಿಪ್ರವಾಗಿ ಹರಡುತ್ತಿರುವ ಕಾರಣ ನಾಳೆಯಿಂದ (ಮಾರ್ಚ್ ೨೮)ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಗೆ ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ರೊಂದಿಗೆ ಸಭೆ ನಡೆಸಿ ಕೋವಿಡ್-೧೯- ಪರಿಸ್ಥಿತಿಯನ್ನು ತಿಳಿದುಕೊಂಡ ಬಳಿಕ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಜತೆಗೆ ಕೋವಿಡ್-೧೯ ಹರಡುವಿಕೆಯನ್ನು ತಡೆಯಲು ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಖ್ಯಮಂತ್ರಿ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯ ವ್ಯಾಪಿ ರಾತ್ರಿ ಕರ್ಫ್ಯೂಗೆ ಸಂಬಂಧಿಸಿದ ಮಾರ್ಗಸೂಚಿಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ರಾತ್ರಿ ೮ ರಿಂದ ಬೆಳಿಗ್ಗೆ ೭ ರವರೆಗೆ ಎಲ್ಲಾ ಮಾಲ್‌ಗಳು ಮುಚ್ಚಲ್ಪಡುತ್ತವೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.
ಕೊರೋನಾ ಬಿರುಗಾಳಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ತತ್ತರಿಸಿ ಹೋಗಿರುವ ಮಹಾರಾಷ್ಟ್ರದಲ್ಲಿ ಇಂದು ಮತ್ತೆ ೩೬ ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗಿದ್ದು, ಇದು ಕೊರೋನಾ ವೈರಸ್ ಸಾಂಕ್ರಾಮಿಕ ಆರಂಭವಾದಾಗಿನಿಂದ ದಾಖಲಾದ ದೈನಂದಿನ ದಾಖಲೆಯ ಪ್ರಮಾಣವಾಗಿದೆ.
ಈ ಬಗ್ಗೆ ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ೩೬,೯೦೨ ಸೋಂಕು ಪ್ರಕರಣಗಳು ವರದಿಯಾಗಿದೆ. ಆ ಮೂಲಕ ಮಹಾರಾಷ್ಟ್ರದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ೨೬,೩೭,೭೩೫ಕ್ಕೆ ಏರಿಕೆಯಾಗಿದೆ. ಅಂತೆಯೇ ಇಂದು ೧೧೨ ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಈ ವರೆಗೂ ಕೋವಿಡ್-೧೯ ಸೋಂಕಿಗೆ ಬಲಿಯಾದವರ ಸಂಖ್ಯೆ ೫೩,೯೦೭ಕ್ಕೆ ಏರಿಕೆಯಾಗಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ೧೭,೦೧೯ ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಕೋವಿಡ್-೧೯ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ೨೩,೦೦,೦೫೬ಕ್ಕೇರಿಕೆಯಾಗಿದ್ದು, ಪ್ರಸ್ತುತ ಮಹಾರಾಷ್ಟ್ರದಲ್ಲಿ ೨,೮೨,೪೫೧ ಸಕ್ರಿಯ ಪ್ರಕರಣಗಳಿವೆ.