ಬೆಂಗಳೂರಿನಲ್ಲಿ ಸೋಂಕಿತರಿಗೆ ‘ಸೀಲ್’

ಬೆಂಗಳೂರು, ಏ.16- ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ರಮೇಣ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿದೆ. ಈ ಸಂಬಂಧ ಕೋವಿಡ್ ಸೋಂಕು ದೃಢಪಟ್ಟವರಿಗೆ ನಾಳೆಯಿಂದಲೇ ಸೀಲ್ ಹಾಕುವ ಕಾರ್ಯವನ್ನು ಪ್ರಾರಂಭಿಸಬೇಕು. ಈ ಬಗ್ಗೆ ಎಲ್ಲಾ ವಲಯಗಳಲ್ಲಿಯೂ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆಯ ಎಂಟು ವಲಯ ಮಟ್ಟದಲ್ಲಿ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ವರ್ಚುಯಲ್ ಮೂಲಕ ನಡೆದ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

ನಗರದಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲಾ ವಲಯಗಳಲ್ಲಿಯೂ ಸೂಕ್ತ ಕ್ರಮ ಕೈಗೊಳ್ಳಬೇಕು. ಕೋವಿಡ್ ಸೋಂಕು ದೃಢಪಟ್ಟವರಿಗೆ ಸೀಲ್ ಹಾಕಬೇಕು. ಅದಕ್ಕೆ ಬೇಕಾದ ಶಾಯಿ(ಇಂಕ್)ಯನ್ನು ಎಲ್ಲಾ ವಲಯಗಳಿಗೂ ಕೂಡಲೆ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದರು.

ಸರ್ಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಡಬೇಕಿರುವ ಹಾಸಿಗೆ ಸಾಮರ್ಥ್ಯವನ್ನು ಇನ್ನೂ ಹೆಚ್ಚಳವಾಗುವಂತೆ ಕ್ರಮವಹಿಸಬೇಕು, ಬೂತ್ ಮಟ್ಟದ ತಂಡಗಳ ಕಾರ್ಯನಿರ್ವಹಣೆಯನ್ನು ಸಕ್ರಿಯವಾಗಿಸಿ ಕಾಂಟ್ಯಾಕ್ಟ್ ಟ್ರೇಸಿಂಗ್ ಸರಿಯಾಗಿ ಮಾಡಬೇಕು, ಎಲ್ಲಾ ವಲಯಗಳಲ್ಲಿಯೂ ಕಂಟೈನ್ಮೆಂಟ್ ಜೋನ್ ಒಂದೇ ಮಾದರಿಲ್ಲಿರಬೇಕು, ಆಂಬ್ಯುಲೆನ್ಸ್ಗಳ ವ್ಯವಸ್ಥೆ, ಟೆಸ್ಟಿಂಗ್ ಹಾಗೂ ವ್ಯಾಕ್ಸಿನೇಷನ್ ಹೆಚ್ಚಳ ಮಾಡಲು ಸೂಕ್ತ ಕ್ರಮಕೈಗೊಳ್ಳಲು ಎಂದರು.

ಕೋವಿಡ್ ಸೋಂಕು ದೃಢಪಟ್ಟು ಹೋಮ್ ಐಸೋಲೇಷನ್ ನಲ್ಲಿದ್ದವರ ಮನೆಗೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಅವರ ಮೇಲೆ ನಿಗಾವಹಿಸಬೇಕು. ನಗರದಲ್ಲಿ ಸದ್ಯ ಗುರುತಿಸಿರುವ ಕೋವಿಡ್ ಆರೈಕೆ ಕೇಂದ್ರಗಳನ್ನು ತ್ವರಿಯವಾಗಿ ತೆರೆಯಬೇಕು. ಕೋವಿಡ್ ಸಲುವಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ಕೋವಿಡ್ ನಿಯಂತ್ರಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ ಬೆಡ್ ಅಲಾಟ್ಮೆಂಟ್ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸಿದ್ದು, ಎಲ್ಲಿಯೂ ಹಾಸಿಗೆಗಳ ಕೊರತೆ ಕಂಡುಬರದಂತೆ ಕ್ರಮವಹಿಸಲಾಗಿದೆ. ಅಲ್ಲದೆ ಲ್ಯಾಬ್‌ಗಳಲ್ಲಿ ತ್ವರಿತವಾಗಿ ರಿಸಲ್ಟ್ ಬರುವಂತೆ ಮಾಡಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳನ್ನು ಸರಿಯಾಗಿ ಬಳಸಿಕೊಂಡು ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆಮಾಡಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ.

ಪಾಲಿಕೆ ವ್ಯಾಪ್ತಿಯ ಎಲ್ಲಾ ವಲಯಗಳಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡುವ ವಿಚಾರವಾಗಿ ಈಗಾಗಲೇ ಜಲಮಂಡಳಿ ಅಧ್ಯಕ್ಷರ ಜೊತೆ ಮಾತನಾಡಿದ್ದು, ಆಯಾ ವಲಯಗಳಲ್ಲಿ ಜೆಟ್ಟಿಗ್ ಯಂತ್ರಗಳನ್ನು ಬಳಸಿಕೊಂಡು ಸೋಂಕು ನಿವಾರಕ ಸಿಂಪಡಣೆ ಮಾಡಲು ಸೂಚನೆ ನೀಡಿದರು.

ಈ ವೇಳೆ ಎಲ್ಲಾ ವಲಯ ಆಯುಕ್ತರುಗಳು, ವಲಯ ಸಂಯೋಜಕರು, ವಲಯ ಜಂಟಿ ಆಯುಕ್ತರುಗಳು, ಆರೋಗ್ಯಾಧಿಕಾರಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.