ನಾಳೆಯಿಂದ ಬೀದರ್-ಬೆಂಗಳೂರು ವಿಮಾನಯಾನ ಪುನರಾರಂಭ

ಬೀದರ: ಡಿ.1:ಡಿಸೆಂಬರ್ 2ರಿಂದ ಬೀದರ್- ಬೆಂಗಳೂರು ನಡುವೆ ವಿಮಾನ ಯಾನ ಸೇವೆ ಪುನರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ತಿಳಿಸಿದ್ದಾರೆ.

ಜಿಎಂಆರ್ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಲಾಗಿದೆ. ಡಿಸೆಂಬರ್ 2ರಿಂದ ವಿಮಾನ ಸೇವೆ ಆರಂಭಿಸಲಾಗುವುದೆಂದು ಟ್ರುಜೆಟ್ ಕಾರ್ಯಾಚರಣೆ ವಿಭಾಗದ ವ್ಯವಸ್ಥಾಪಕ ಪ್ರಸಾದ ದೃಢಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಟ್ರುಜೆಟ್ ಸರಿಯಾಗಿ ಸೇವೆ ಕೊಡುತ್ತಿಲ್ಲ ಎಂದು ಪ್ರಯಾಣಿಕರು ಬುಕ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಪ್ರಯಾಣಿಕರ ಕೊರತೆ ಕಾರಣ ಕೊನೆಯ ಕ್ಷಣಗಳಲ್ಲಿ ಟ್ರುಜೆಟ್ ಮುನ್ಸೂಚನೆ ನೀಡದೆ ವಿಮಾನ ಹಾರಾಟ ಸ್ಥಗಿತಗೊಳಿಸುತ್ತಿದೆ ಎನ್ನುವ ವಿಷಯಗಳು ಸಭೆಯಲ್ಲಿ ಪ್ರಸ್ತಾಪವಾಗಿವೆ. ಎಲ್ಲವನ್ನೂ ಸರಿಪಡಿಸಿ ಮತ್ತೆ ವಿಮಾನ ಸೇವೆ ಆರಂಭಿಸುವ ಭರವಸೆಯನ್ನು ಟ್ರುಜೆಟ್‍ನ ಅಧಿಕಾರಿಗಳು ನೀಡಿದ್ದಾರೆ.

ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಸಂಸದ ಭಗವಂತ ಖೂಬಾ ಅವರು ಕೇಂದ್ರ ಸಚಿವರಾದ ಮೇಲೆ ವಿಮಾನ ಸೇವೆ ಬಂದ್ ಆಗಿದೆ ಎಂದು ವಾಗ್ದಾಳಿ ನಡೆಸಿದ್ದರು.