ನಾಳೆಯಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರೇಡಿಯೋ ಪಾಠ

ಬೆಂಗಳೂರು,ಜ.೧೦- ಒಂದರಿಂದ ೪ನೇ ತರಗತಿ ವಿದ್ಯಾರ್ಥಿಗಳಿಗೆ ನಾಳೆಯಿಂದ ರಾಜ್ಯಾದ್ಯಂತ ’ಕಲಿಯುತ್ತ ನಲಿಯೋಣ’ ಪಾಠಗಳು ಆರಂಭವಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ಆಕಾಶವಾಣಿ ಮೂಲಕ ನಾಳೆಯಿಂದ ಈ ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಮಕ್ಕಳಿಗಾಗಿ ನಲಿ-ಕಲಿ ಮತ್ತು ಕಲಿ-ನಲಿ ಕಾರ್ಯಕ್ರಮಗಳನ್ನು ನಾಳೆಯಿಂದ ಏ. ೫ರವರೆಗೆ ಆಕಾಶವಾಣಿ ಪ್ರಸಾರ ಮಾಡಲಿದೆ. ಬೆಳಿಗ್ಗೆ ೧೦ ಗಂಟೆಯಿಂದ ೧೦.೧೫ರವರೆಗೆ ೧ ಮತ್ತು ೫ನೇ ತರಗತಿಗಳಿಗಾಗಿ ಹಾಗೂ ೧೦.೧೫ ರಿಂದ ೧೦.೩೦ರವರೆಗೂ ೩ ಮತ್ತು ೪ನೇ ತರಗತಿಗಳಿಗಾಗಿ ಹಾಡು, ಕತೆ, ನಾಟಕ, ಸಂಭಾಷಣೆ, ಒಗಟು ಸೇರಿದಂತೆ ವಿವಿಧ ಆಸಕ್ತಿಯುಳ್ಳ ಕಾರ್ಯಕ್ರಮಗಳ ಮೂಲಕ ಆಯಾ ತರಗತಿಗಳ ಮಕ್ಕಳ ಕಲಿಕೆ ಮುಂದುವರೆಯುವಂತೆ ಮಾಡಲು ಈ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ನಲಿ-ಕಲಿಯ ಆಶಯಗಳಾದ ಆಲಿಸುವಿಕೆ, ವಸ್ತು ಗುರುತಿಸುವಿಕೆ, ಸ್ವ ಕಲಿಕೆ, ಶಬ್ಧ ಪರಿಚಯ ಹೀಗೆ ಹಲವು ವಿಷಯಗಳ ಬಗ್ಗೆ ವಿನೂತನ ಮಾದರಿಯಲ್ಲಿ ತಿಳಿಸುವ ಪ್ರಯತ್ನ ಇದಾಗಿದ್ದು, ೧ ರಿಂದ ೪ನೇ ತರಗತಿವರೆಗೆ ಓದುತ್ತಿರುವ ಮಕ್ಕಳ ಎಲ್ಲಪೋಷಕರಿಗೆ ಈ ಕಾರ್ಯಕ್ರಮವನ್ನು ಮಕ್ಕಳೊಂದಿಗೆ ಆಲಿಸಬೇಕೆಂದು ಮನವಿ ಮಾಡಿದ್ದಾರೆ.
ರಾಜ್ಯದ ೧೩ ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗುತ್ತಿದ್ದು, ನಂತರ ಈ ಕಾರ್ಯಕ್ರಮಗಳು ಯು ಟೂಬ್‌ನಲ್ಲೂ ಲಭ್ಯವಾಗಲಿದೆ. ಮಕ್ಕಳ ಮನಸ್ಸುಗಳನ್ನು ವಿಕಸನಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭಿಸಲಾಗುತ್ತಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.