ನಾಳೆಯಿಂದ ಪದವಿ ತರಗತಿಗಳು ಆರಂಭ

ಬೆಂಗಳೂರು,ಜ.೧೪- ನಾಳೆಯಿಂದ ಪೂರ್ಣ ಪ್ರಮಾಣದಲ್ಲಿ ಪದವಿ ತರಗತಿಗಳು ಆರಂಭವಾಗಲಿವೆ. ಇತ್ತೀಚೆಗಷ್ಟೇ ಎಸ್‌ಎಸ್‌ಎಲ್‌ಸಿ, ಪಿಯುಸಿ ತರಗತಿಗಳು ಆರಂಭವಾಗಿದ್ದ ಬೆನ್ನ ಹಿಂದೆಯೇ ಪದವಿ ತರಗತಿಗಳು ಆರಂಭವಾಗಲಿದೆ. ಈಗ ೧೦ ತಿಂಗಳ ನಂತರ ಇಂಜಿಯರಿಂಗ್ ಮತ್ತು ಭೌತಿಕ ತರಗತಿಗಳು ಪುನರಾರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಹೇಳಿದೆ.
ಕೋವಿಡ್ ಹಿನ್ನೆಲೆಯಲ್ಲಿ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ನಿಯಮಗಳನ್ನು ಪಾಲಿಸಿ ತರಗತಿಗಳಿಗೆ ಹಾಜರಾಗಬೇಕಾಗಿದೆ. ಇಲ್ಲದಿದ್ದರೆ ಆನ್‌ಲೈನ್ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದ್ದು, ಈ ಆಯ್ಕೆ ವಿದ್ಯಾರ್ಥಿಗಳ ವಿವೇಚನೆಗೆ ಬಿಡಲಾಗಿದೆ.
ಆಫ್‌ಲೈನ್ ತರಗತಿಗೆ ಹಾಜರಾಗಬೇಕಾದರೆ ಪೋಷಕರಿಂದ ವಿದ್ಯಾರ್ಥಿಗಳು ಒಪ್ಪಿಗೆಪತ್ರ ಕಡ್ಡಾಯವಾಗಿದ್ದು, ಇಲ್ಲದಿದ್ದರೆ ಅವಕಾಶ ನಿರಾಕರಿಸಲಾಗುತ್ತದೆ.
ಕೊಠಡಿಗಳ ಸಂಖ್ಯೆಗನುಗುಣವಾಗಿ ವಿದ್ಯಾರ್ಥಿಗಳು ಕುಳಿತುಕೊಳ್ಳಲಿ ಆಸನದ ವ್ಯವಸ್ಥೆ, ಸಾಮಾಜಿಕ ಅಂತರ ಅಗತ್ಯ ಬಿದ್ದರೆ ಪಾಳಿ ಆಧಾರದಲ್ಲಿ ತರಗತಿಗಳನ್ನು ಪ್ರಾರಂಭಿಸಲು ಅವಕಾಶ ನೀಡಲಾಗಿದೆ.
ಒಂದು ವೇಳೆ ತರಗತಿಗಳಿಗೆ ಹಾಜರಾಗಲು ಬಯಸದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಬಹುದಾಗಿದೆ. ಅವರಿಗೆ ಪಠ್ಯಕ್ರಮದ ಬಗ್ಗೆ ಇರುವ ಗೊಂದಲವನ್ನು ನಿವಾರಿಸುವಂತೆ ಉನ್ನತ ಶಿಕ್ಷಣ ಇಲಾಖೆ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬ್ಬಂದಿ ಕೊರೊನಾ ಪರೀಕ್ಷೆಗೆ ಒಳಪಡುವುದು ಅಗತ್ಯವಿಲ್ಲ.ಆದರೆ, ಸೋಂಕು ಲಕ್ಷಣವಿರುವವರಿಗೆ ಪರೀಕ್ಷೆ ಕಡ್ಡಾಯವಾಗಿದೆ. ವಿದ್ಯಾರ್ಥಿಗಳ ಹಾಜರಾತಿ ಪ್ರತಿ ಕೊಠಡಿಗೆ ಶೇ. ೫೦ ರಷ್ಟು ಮೀರಬಾರದು.
ವಿದ್ಯಾರ್ಥಿಗಳು ಮನೆಯಿಂದಲೇ ಊಟ, ಕುಡಿಯುವ ನೀರು ತರಬೇಕು, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿದೆ. ಇದರ ಜತೆಗೆ ಮುಖ್ಯದ್ವಾರ, ಗ್ರಂಥಾಲಯ, ಶೌಚಾಲಯ, ಕೊಠಡಿ,ಪೀಠೋಪಕರಣ ಮತ್ತು ಪುಸ್ತಕಗಳನ್ನು ಸ್ಯಾನಿಟೈಸ್ ಮಾಡುವುದು ಕಡ್ಡಾಯವಾಗಿದೆ.