ನಾಳೆಯಿಂದ ಚನ್ನಬಸವಾಶ್ರಮದಲ್ಲಿ ವಚನ ಪಾರಾಯಣ

ಭಾಲ್ಕಿ:ಎ.14: ವಚನ ಪಿತಾಮಹ ಫ.ಗು.ಹಳಕಟ್ಟಿ ಸಂಪಾದಿಸಿದ ವಚನ ಸಂಕಲನದ ಶತಮಾನೋತ್ಸವ, ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಮತ್ತು ಡಾ.ಚನ್ನಬಸವ ಪಟ್ಟದ್ದೇವರ 24ನೆಯ ಸ್ಮರಣೋತ್ಸವ, ವಚನ ಜಾತ್ರೆ-2023 ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವಚನ ಸಪ್ತಾಹ(ಪಾರಾಯಣ) ಹಮ್ಮಿಕೊಳ್ಳಲಾಗಿದ್ದು ಏಕಕಾಲಕ್ಕೆ ಒಂದು ಸಾವಿರ ಭಕ್ತರು ವಚನ ಪಠಣ ಮಾಡಲಿದ್ದಾರೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದರು.
ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಶೋಧಕರು, ಸಾಹಿತ್ಯ ಪ್ರಚಾರಕರು, ಸಂಪಾದಕರು ಆಗಿದ್ದ ಫ.ಗು.ಹಳಕಟ್ಟಿ ಅವರು 1923ರಲ್ಲಿ ವಚನಗಳನ್ನು ಸಂಶೋಧಿಸಿ ಮೊದಲ ಗ್ರಂಥ ಪ್ರಕಟಿಸಿದರು. ಅವರು ಸಂಗ್ರಹಿಸಿದ ವಚನ ಸಾಹಿತ್ಯ ಗ್ರಂಥಕ್ಕೆ ನೂರು ವಸಂತಗಳು ಪೂರೈಸುತ್ತಿವೆ.
ಈ ಹಿನ್ನೆಲೆಯಲ್ಲಿ ಬಸವಣ್ಣನವರು ರಚಿಸಿದ ವಚನಗಳು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಒಂದು ವಾರಕಾಲ ವಚನ ಪಾರಾಯಣ ಆಯೋಜಿಸಿದ್ದೇವೆ. ಇದೇ 15 ರಿಂದ 21ರ ವರೆಗೆ ಇಲ್ಲಿಯ ಚನ್ನಬಸವಾಶ್ರಮದಲ್ಲಿ ಬೆಳಿಗ್ಗೆ 6 ರಿಂದ 7 ಗಂಟೆ ವರೆಗೆ ವಚನಗಳ ಪಠಣ ನಡೆಯಲಿದೆ.
ಈಗಾಗಲೇ ಸಾವಿರಕ್ಕೂ ಅಧಿಕ ಭಕ್ತರು ವಚನ ಪಠಣಕ್ಕೆ ತಮ್ಮ ಹೆಸರು ನೋಂದಾಯಿಸಿದ್ದು, ಇನ್ನೂ ಪ್ರಗತಿಯಲ್ಲಿದೆ. ವಚನಗಳು ನಮ್ಮ ಜೀವನದ ದಿಕ್ಕು ಬದಲಿಸುತ್ತವೆ. ಹಾಗಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ತಮ್ಮ ಹೆಸರು ನೋಂದಾಯಿಸಿ ಈ ವಚನ ಪಾರಾಯಣದಲ್ಲಿ ಭಾಗವಹಿಸಿ ವಚನಗಳನ್ನು ಅರ್ಥೈಸಿಕೊಂಡು ಅದರಂತೆ ಬದುಕು ಸಾಗಿಸಬೇಕು ಎಂದು ತಿಳಿಸಿದರು.
ನೇತೃತ್ವ ವಹಿಸಿದ ಗುರುಬಸವ ಪಟ್ಟದ್ದೇವರು ಮಾತನಾಡಿ, ವಿಶ್ವಗುರು ಬಸವಣ್ಣನವರ ಜಯಂತಿ, ಡಾ.ಚನ್ನಬಸವ ಪಟ್ಟದ್ದೇವರ 24ನೆಯ ಸ್ಮರಣೋತ್ಸವ, ವಚನ ಜಾತ್ರೆ-2023 ಅರ್ಥಪೂರ್ಣ ಆಚರಣೆಗೆ ಸ್ವಾಗತ ಸಮಿತಿ ಸೇರಿ ವಿವಿಧ ಸಮಿತಿಗಳನ್ನು ರಚಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವಚನ ಪಾರಾಯಣ ಸೇವಾ ಸಮಿತಿ ಅಧ್ಯಕ್ಷ ಮಲ್ಲಮ್ಮ ನಾಗನಕೇರೆ ಮಾತನಾಡಿ, ವಚನ ಪಾರಾಯಣದಲ್ಲಿ ಪಾಲ್ಗೊಳ್ಳುವ ಮಹಿಳೆಯರ ಹೆಸರನ್ನು ನೋಂದಾಯಿಸಿ ಕೊಳ್ಳಲಾಗುತ್ತಿದೆ. ಮಹಿಳೆಯರು ಕಡ್ಡಾಯವಾಗಿ ಬಿಳಿ ಸಮವಸ್ತ್ರ ಧರಿಸಿ ಪಾರಾಯಣದಲ್ಲಿ ಪಾಲ್ಗೊಳ್ಳಬೇಕು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸೋಮನಾಥಪ್ಪ ಅಷ್ಟೂರೆ, ಬಸವರಾಜ ವಂಕೆ, ನಾಗಭೂಷಣ ಮಾಮಡಿ ಇದ್ದರು.
ವಿವಿಧ ಸಮಿತಿ ರಚನೆ
ಇದೇ 19 ರಿಂದ 23ರ ವರೆಗೆ ನಡೆಯಲಿರುವ ಐದು ದಿನಗಳ ಕಾರ್ಯಕ್ರಮದ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಿ, ಸನ್ಮಾನಿಸಲಾಯಿತು. ದಾಸೋಹ ಸೇವಾ ಸಮಿತಿ ಅಧ್ಯಕ್ಷ ಸೋಮನಾಥಪ್ಪ ಅಷ್ಟೂರೆ, ಹಣಕಾಸು ಸೇವಾ ಸಮಿತಿ ಅಧ್ಯಕ್ಷ ಬಸವರಾಜ ವಂಕೆ, ವೇದಿಕೆ ಸಮಿತಿ ಅಧ್ಯಕ್ಷ ನಾಗಭೂಷಣ ಮಾಮಡಿ ಮತ್ತು ಮೆರವಣಿಗೆ ಬೈಕ್ ರ್ಯಾಲಿ ಸಮಿತಿ ಅಧ್ಯಕ್ಷ ಈಶ್ವರ ರುಮ್ಮಾ ಅವರನ್ನು ಆಯ್ಕೆ ಮಾಡಿ ಅವರನ್ನು ಉಭಯ ಶ್ರೀಗಳು ಆಶೀರ್ವದಿಸಿ, ಶುಭ ಕೋರಿದರು.