ನಾಳೆಯಿಂದ ಗ್ರಾಹಕರಿಗೆ ದರ ಏರಿಕೆ ಬಿಸಿ

(ಸಂಜೆವಾಣಿ ಪ್ರತಿನಿಧಿಯಿಂದ)
ಹಾಲು ೩ರೂ. ಹೆಚ್ಚಳ

ಬೆಂಗಳೂರು, ಜು. ೩೧- ನಾಳೆಯಿಂದ ಹಾಲಿನ ದರ ಮತ್ತು ಹೋಟೆಲ್‌ಗಳ ತಿಂಡಿ- ತಿನಿಸುಗಳ ದರ ಹೆಚ್ಚಳದ ಬಿಸಿ ಜನ ಸಾಮಾನ್ಯರಿಗೆ ತಟ್ಟಲಿದ್ದು, ಈ ಬೆಲೆ ಏರಿಕೆಯ ನಡುವೆಯೇ ಗೃಹಜ್ಯೋತಿ ಯೋಜನೆಯ ಶೂನ್ಯ ವಿದ್ಯುತ್ ಬಿಲ್‌ನ ಲಾಭ ನಾಳೆಯಿಂದ ಜನಸಾಮಾನ್ಯರಿಗೆ ಸಿಗುತ್ತಿರುವುದು ಸ್ವಲ್ಪ ಮಟ್ಟಿಗೆ ನಿರಾಳತೆ ತರಲಿದೆ.
ಆಗಸ್ಟ್ ೧ ರಿಂದ ಜಾರಿಯಾಗುವಂತೆ ನಂದಿನಿ ಹಾಲಿನ ಬೆಲೆ ಪ್ರತಿ ಲೀಟರ್‌ಗೆ ೩ ರೂ. ಹೆಚ್ಚಳವಾಗಲಿದೆ. ಇದರ ಜತೆಗೆ ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ, ಚಹಾ, ತಿಂಡಿ-ತಿನಿಸು ಸೇರಿದಂತೆ ಶೇ. ೧೦ ರಷ್ಟು ದರ ಹೆಚ್ಚಳವೂ ಆಗಲಿದ್ದು, ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ.
ಈ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಯೋಜನೆಯ ಲಾಭ ನಾಳೆಯಿಂದಲೇ ಸಿಗುತ್ತಿದ್ದು, ೨೦೦ ಯೂನಿಟ್ ಒಳಗೆ ವಿದ್ಯುತ್ ಬಳಸುವವರಿಗೆ ಶೂನ್ಯ ದರದ ಬಿಲ್ ಬರಲಿದೆ. ಗೃಹಜ್ಯೋತಿ ಯೋಜನೆಯ ರಾಜ್ಯದಲ್ಲಿ ಸುಮಾರು ೧.೧೬ ಕೋಟಿ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಹಾಲಿನ ದರ, ಹೋಟೆಲ್ ತಿಂಡಿ-ತಿನಿಸುಗಳ ದರ ಏರಿಕೆ ಜತೆಗೆ ನಾಳೆ ಅಡುಗೆ ಅನಿಲದ ಪರಿಷ್ಕರಣೆಯೂ ಆಗಲಿದೆ. ಪ್ರತಿ ತಿಂಗಳ ಮೊದಲ ದಿನದಂದು ಅಡುಗೆ ಅನಿಲ ದರ ಪರಿಷ್ಕರಣೆಯಾಗಲಿದ್ದು, ಅಡುಗೆ ಅನಿಲ ದರ ಹೆಚ್ಚಾಗುತ್ತದೆಯೋ ಇಲ್ಲ ಇದ್ದಷ್ಟೇ ಇರುತ್ತದೋ ಎಂಬ ಕುತೂಹಲ ಮೂಡಿದೆ.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುತ್ತಿರುವ ಸಾರಿಗೆ ಸಂಸ್ಥೆ ನಾಳೆಯಿಂದ ಒಪ್ಪಂದದ ಮೇಲೆ ಪಡೆಯುವ ಬಸ್‌ಗಳ ದರವನ್ನು ಪರಿಷ್ಕರಿಸಿದ್ದು, ಒಪ್ಪಂದದ ಮೇಲೆ ಬಸ್ ಪಡೆಯುವವರು ಸರಾಸರಿ ಪ್ರತಿ ಕಿಲೋ ಮೀಟರ್‌ಗೆ ೩ ರೂ.ಗಳ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಇದರ ಜತೆಗೆ ೫ ಕೋಟಿ ರೂ.ಗಳಿಗಿಂತ ಹೆಚ್ಚಿನ ವಹಿವಾಟು ಇರುವ ಉದ್ಯಮಿ ಸಂಸ್ಥೆಗಳು ನಾಳೆಯಿಂದ ಎಲೆಕ್ಟ್ರಾನಿಕ್ ಇನ್ ವಾಯ್ಸ್ ಸಲ್ಲಿಸುವುದು ಕಡ್ಡಾಯವಾಗಲಿದೆ.
ಮದ್ಯ ಹಾಗೂ ವಾಹನ ತೆರಿಗೆ ದರ ಹೆಚ್ಚಳ
ಕಳೆದ ಜುಲೈ ೨೦ ರಿಂದಲೇ ಮದ್ಯದ ಮೇಲಿನ ದರ ಶೇ.೨೦ ರಷ್ಟು ಹೆಚ್ಚಾಗಿದೆ. ಹಾಗೆಯೇ ವಾಹನಗಳ ತೆರಿಗೆಯನ್ನು ಹೆಚ್ಚಿಸಲಾಗಿದೆ. ನಾಳೆಯಿಂದ ಗ್ರಾಹಕರು ಕೆಲ ವಸ್ತುಗಳಿಗೆ ಹೆಚ್ಚಿನ ದರ ತೆರವು ಹೊರೆಯನ್ನು ಹೊರಬೇಕಾಗುತ್ತದೆ.
ಹಾಲಿನ ದರ ಎಷ್ಟು ಹೆಚ್ಚಳ
ನಂದಿನಿ ಹಾಲಿನ ದರ ನಾಳೆಯಿಂದ ಪ್ರತಿ ಲೀಟರ್‌ಗೆ ೩ ರೂ. ಹೆಚ್ಚಳವಾಗಲಿದ್ದು, ಸದ್ಯ ನೀಲಿ ಪ್ಯಾಕೇಟ್‌ನಲ್ಲಿ ಬರುವ ನಂದಿನಿ ಹಾಲಿನ ದರ ಲೀಟರ್‌ಗೆ ೩೦ ರೂ. ಇತ್ತು. ಅದು ನಾಳೆಯಿಂದ ೪೨ ರೂ. ಆಗಲಿದೆ. ಅರ್ಧ ಲೀಟರ್ ದರ ೨೦ ರೂ.ಗಳಿತ್ತು ಅದು ೨೨ ರೂ. ಆಗಲಿದೆ. ನಂದಿನಿ ಶುಭಂ ಹಾಲಿನ ದರ ೧ ಲೀಟರ್‌ಗೆ ೪೫ ರಿಂದ ೪೮ ರೂ.ಗಳಿಗೆ, ನಂದಿನಿ ಸ್ಪೆಷಲ್ ಹಾಲಿನ ದರ ಒಂದು ಲೀಟರ್‌ಗೆ ೪೫ ರೂ.ಗಳಿಂದ ೪೮ ರೂ.ಗಳವರೆಗೆ, ನಂದಿನಿ ಸಮೃದ್ಧಿ ಹಾಲಿನ ದರ ೪೮ ರೂ.ಗಳಿಂದ ೫೧ ರೂ.ಗಳಿಗೆ ಏರಿಕೆಯಾಗಲಿದೆ. ಹಾಲಿನ ದರದಲ್ಲಿ ೩ ರೂ. ಹೆಚ್ಚಳವಾಗಿರುವುದು ಚಿಲ್ಲರೆ ಸಮಸ್ಯೆಯೂ ಎದುರಾಗಲಿದೆ.