ನಾಳೆಯಿಂದ ಗ್ರಾಮೀಣ ಪ್ರದೇಶದಲ್ಲಿ ೨ನೇ ಹಂತದ ಮನೆ-ಮನೆ ಸರ್ವೆ-ಡಿಸಿ

ರಾಯಚೂರು, ಮೇ.೩೦-ಗ್ರಾಮೀಣ ಪ್ರದೇಶದಲ್ಲಿ ಕೋವಿಡ್-೧೯ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಾಯಕ ಆಯುಕ್ತರು, ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಆರೋಗ್ಯ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಪ್ರತಿ ದಿನ ೩೨ ಗ್ರಾಮಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಕೈಗೊಳ್ಳಲಾದ ಮೊದಲ ಹಂತದ ಮನೆ ಮನೆ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಎರಡನೇ ಹಂತದ ಸಮೀಕ್ಷೆಗೆ ಜಿಲ್ಲಾಡಳಿತ ಸಿದ್ದವಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಅವರು ಹೇಳಿದರು.
ಅವರು ಮೇ.೨೯ರ ಶನಿವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಎರಡನೇ ಹಂತದ ಮನೆ ಮನೆ ಸಮೀಕ್ಷಾ ಕಾರ್ಯದಲ್ಲಿ ಕೋವಿಡ್-೧೯ ಸೋಂಕು ಲಕ್ಷಣಗಳುಳ್ಳವರಿಗೆ ವಿತರಿಸಲು ಸಿದ್ದಪಡಿಸಲಾಗಿತ್ತಿರುವ ಔಷಧ ಕಿಟ್ ತಯಾರಿಕೆ ಪ್ರಕ್ರಿಯೆಯನ್ನು ಪರಿಶೀಲಿಸಿ ಮಾತನಾಡಿದರು.
ಮೊದಲ ಸುತ್ತಲಿನ ಮನೆ ಮನೆ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಈ ವೇಳೆ ಕೋವಿಡ್ ತಪಾಸಣೆ ಹಾಗೂ ಮಾತ್ರೆಗಳನ್ನು ವಿತರಿಸುವುದು, ಕೋವಿಡ್ ಸೋಂಕಿತರನ್ನು ಹತ್ತಿರದ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವುದು ಹಾಗೂ ಹೊರಗಿನಿಂದ ಬಂದವರ ಆರೋಗ್ಯದ ಮೇಲೆ ನಿಗಾ ಇರಿಸುವುದು ಸೇರಿದಂತೆ ಇತರ ಕಾರ್ಯಗಳನ್ನು ಮಾಡಲಾಗಿದೆ ಎಂದರು.
ಕಳೆದ ನಾಲ್ಕು ದಿನದಲ್ಲಿ ಗ್ರಾಮೀಣ ಭಾಗದಲ್ಲಿ ಸುಮಾರು ೫೦೦ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅವರನ್ನೆಲ್ಲಾ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ, ಸಮೀಕ್ಷೆ ವೇಳೆ ಆಂಟಿಬಯಾಟಿಕ್, ಜಿಂಕ್, ವಿಟಮಿನ್ ಸಿ ಅಂಶಗಳುಳ್ಳ ೧೦ ಸಾವಿರ ಮಾತ್ರೆಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ವಾರ್ಡ ಸಮಿತಿ ರಚಿಸಿದ ಪ್ರತಿಫಲ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳಲ್ಲಿ ಶೇ. ೧೫ ಪ್ರತಿಶತ ಇಳಿಮುಖಯಾಗಿವೆ. ಈ ಹಿಂದೆ ಇದು ಶೇ.೩೦ಕ್ಕೂ ಹೆಚ್ಚಿತ್ತು, ಮೊದಲು ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಶೇ. ೯೦-೯೫ ರಷ್ಟು ಹಾಸಿಗೆಗಳು ಭರ್ತಿಯಾಗುತ್ತಿದ್ದವು, ಇದೀಗ ಶೇ.೪೫ ರಷ್ಟು ಹಾಸಿಗೆಗಳು ಮಾತ್ರ ಭರ್ತಿಯಾಗಿವೆ ಎಂದು ಮಾಹಿತಿ ನೀಡಿದರು.
ಬರುವ ಸೋಮವಾರದಿಂದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತೆರೊಂದಿಗೆ ಎರಡನೇ ಹಂತದ ಮನೆ ಮನೆ ಸರ್ವೆ ಕಾರ್ಯ ಆರಂಭಗೊಳ್ಳಿದ್ದು, ಅದರ ಪೂರ್ವಭಾವಿ ತಯಾರಿಯೇ ಸುಮಾರು ೨೫ ಸಾವಿರ ಕೋವಿಡ್ ಮೆಡಿಸಿನ್ ಕಿಟ್ ಗಳನ್ನು ಸಿದ್ದಪಡಿಸಲಾಗುತ್ತಿದೆ, ಒಂದು ಕಿಟ್‌ನಲ್ಲಿ ವಿಟಮಿನ್-ಸಿ, ಜಿಂಕ್ ಸೇರಿದಂತೆ ಇತರೆ ಮಾತ್ರೆಗಳಿರುತ್ತವೆ ಎಂದು ತಿಳಿಸಿದರು.
ಪ್ರತಿ ಆಶಾ ಕಾರ್ಯಕರ್ತೆಯರಿಗೆ ತಲಾ ೧೦ ಮೆಡಿಸಿನ್ ಕಿಟ್‌ಗಳನ್ನು ನೀಡಿ ಸೋಮವಾರದಿಂದ ಆರಂಭವಾಗುವ ಮನೆ ಮನೆ ಸಮೀಕ್ಷೆ ಕಾರ್ಯದಲ್ಲಿ ಕೋವಿಡ್ ದೃಢಪಟ್ಟವರಿಗೆ ಮೆಡಿಸಿನ್ ಕಿಟ್‌ಗಳನ್ನು ವಿತರಿಸಲಾಗುವುದು, ಅದನ್ನು ಸೇವಿಸಿದ್ದಲ್ಲೀ ರೋಗಿಗಳಿಗೆ ಗಂಭೀರ ಸ್ಥಿತಿ ಬರುವುದಿಲ್ಲ ಹಾಗೂ ಮನೆ ಮನೆ ಸರ್ವೆ ಕಾರ್ಯವು ಪ್ರತಿ ಹಳ್ಳಿ ಹಳ್ಳಿಗೂ ತಲುಪಲಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಡಿ.ಎಸ್.ಒ, ನಾಗರಾಜ್, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸುರೇಂದ್ರ ಬಾಬು, ಆರ್.ಸಿ.ಎಚ್ ಡಾ. ವಿಜಯ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.