ನಾಳೆಯಿಂದ ಕೈ ಬಸ್ ಯಾತ್ರೆ

ಚುನಾವಣೆಗೆ ಕಹಳೆ
ಬೆಂಗಳೂರು,ಜ.೧೦- ರಾಜ್ಯ ವಿಧಾನಸಭೆಗೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಶತಾಯ ಗತಾಯ ಅಧಿಕಾರಕ್ಕೆ ಬರಬೇಕು ಎನ್ನುವ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ನಾಯಕರು ಆಡಳಿತಾರೂಢ ಬಿಜೆಪಿ ಸರ್ಕಾರದ ಹಗರಣದ “ಬಿಜೆಪಿ ಪಾಪದ ಪುರಾಣ” ಆರೋಪ ಪಟ್ಟಿ ಬಿಡುಗಡೆ ಮಾಡಿದ್ದು ಈ ಸಂಬಂಧ ಜನರಿಗೆ ತಿಳಿಸಲು ನಾಳೆಯಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಿರಿಯ ನಾಯಕರ ತಂಡ ಬಸ್ ಯಾತ್ರೆ ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ “ಪ್ರಜಾಧ್ವನಿ ವಿಶೇಷ ಬಸ್”ಗೆ ಪೂಜೆ ಸಲ್ಲಿಸಿದ ಜಂಟಿ ಪ್ರತಿಕಾಗೋಷ್ಠಿಯಲ್ಲಿ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಪ್ರಕಟಿಸಿದ್ದಾರೆ.
ಕೆಪಿಸಿಸಿ ಕಛೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್,ಬೆಳಗಾವಿಯಿಂದ ವಿಧಾನಸಭೆ ವಿಜಯಕ್ಕೆ ಮುನ್ನುಡಿ ಬರೆಯಲಿದ್ದೇವೆ.ಇಡೀ ವಿಶ್ವದಲ್ಲೇ ಕರ್ನಾಟಕದ ಬಗ್ಗೆ ದೊಡ್ಡ ಗೌರವ ಇತ್ತುಆದರೆ, ಬಿಜೆಪಿ ಸರ್ಕಾರ ಕಳಕ ತಂದಿದೆ ಎಂದು ದೂರಿದರು.
ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.ರೈತರ ಬದುಕು ಹಸನಾಗಲಿಲ್ಲ, ಉದ್ಯೋಗವಕಾಶ ಕಲ್ಪಿಸಲಿಲ್ಲ.
ಐಎಎಸ್ ಅಧಿಕಾರಿಗಳೆಲ್ಲಾ ಜೈಲು ಸೇರುವ ಇತಿಹಾಸ ಸೃಷ್ಟಿಸಿದ್ದಾರೆ.ಯಾವುದೇ ವಿಚಾರದಲ್ಲಿ ಧ್ವನಿ ಎತ್ತಿದರೆ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ಸರ್ಕಾರದ ಪಾಪದ ಪುರಾಣವನ್ನು ಜನರ ಮುಂದೆ ಇಡಬೇಕಾಗಿದೆ. ಹಾಗಾಗಿ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.
ಪ್ರಜಾಧ್ವನಿ ಪ್ರಜೆಗಳ ಧ್ವನಿ, ಪ್ರಜೆಗಳ ಭಾವನೆ.ನಾವು ಸಕಾರಾತ್ಮಕವಾಗಿ ಯೋಚಿಸುತ್ತಿದ್ದೇವೆ,ಮೂರೂವರೆ ವರ್ಷದ ಬಿಜೆಪಿ ಸರ್ಕಾರ ಯಾವುದರಲ್ಲಿ ವಿಫಲವಾಗಿದೆ ಎಂಬುದನ್ನು ಜನರಿಗೆ ತಿಳಿಸಲು ಯಾತ್ರೆ ಕೈಗೊಂಡಿದ್ದೇವೆ ಎಂದರು.ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿಯ ದುರಾಡಳಿತದ ವಿರುದ್ಧ ಆರೋಪ ಪಟ್ಟಿಗೆ. “ಬಿಜೆಪಿ ಪಾಪದ ಪುರಣ” ಅಂತ ನಾಮಕರಣ ಮಾಡಿದ್ದೇವೆ, ಬಿಜೆಪಿ ಸರ್ಕಾರ ಅನೈತಿಕ ಮಾರ್ಗದಿಂದ ರಚನೆಯಾಗಿದೆ. ಜನರು ಈ ಸರ್ಕಾರಕ್ಕೆ ಆಶೀರ್ವಾದ ಮಾಡಿರಲಿಲ್ಲ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶಾಸಕರ ಖರೀದಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು,ಕೊರೊನಾ ರೋಗ ಬಂದಾಗ ಮೂರು ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ.

ನಾಳೆಯಿಂದ ಉತ್ತರ ಕರ್ನಾಟಕದಲ್ಲಿ ಕೈಗೊಳ್ಳಲಿರುವ ಬಸ್ ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ ಸಲ್ಲಿಸಿದರು.

ಅಧಿವೇಶನದಲ್ಲಿ ದಾಖಲೆ ಸಮೇತ ಪ್ರಸ್ತಾಪ ಮಾಡಿದ್ದೆವು. ಆದರೂ ಉತ್ತರ ನೀಡಿಲ್ಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ದುರ್ಬಲ, ಭ್ರಷ್ಟ ಮುಖ್ಯಮಂತ್ರಿ ಎಂದು ಆರೋಪಿಸಿದರು.೧೫ನೇ ಹಣಕಾಸು ಆಯೋಗದಿಂದ ಐದು ಸಾವಿರ ಕೋಟಿ ಬರಬೇಕು.ಹಣ ಕೊಡಲು ಆಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರ ಬರೆದು ಹೇಳಿದ್ದಾರೆ.ರಾಜ್ಯದಲ್ಲಿ ೨೫ ಮಂದಿ ಬಿಜೆಪಿ ಸಂಸದರು ಇದ್ದಾರೆ
ಇಷ್ಟು ಜನರಿದ್ದರೂ ಪ್ರಧಾನಿ ಮೇಲೆ ಒತ್ತಡ ಹಾಕಲು ಸಾಧ್ಯವಾಗಿಲ್ಲ ಎಂದರು.ಕೇವಲ ನಾಲ್ಕು ವರ್ಷದಲ್ಲಿ ೩ ಲಕ್ಷ ಕೋಟಿ ಸಾಲ ಮಾಡಿದ್ದಾರೆ,ಬಡ್ಡಿ ಕಟ್ಟಲು ಆಗದಷ್ಟು ಸಾಲ ಮಾಡಿಟ್ಟಿದ್ದಾರೆ. ಪ್ರತಿಯೊಬ್ಬರ ಮೇಲೆ ೮೬ ಸಾವಿರ ರೂಪಾಯಿ ಸಾಲ ಇದೆ.ಬಿಜೆಪಿ ೩ ಲಕ್ಷ ಕೋಟಿ ಸಾಲ ಮಾಡಿದೆ.ಜನರನ್ನು ಉಳಿಸಲು,ರಾಜ್ಯ ಉಳಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ದೂರಿದರು.

“ಪ್ರಜಾಧ್ವನಿ ವಿಶೇಷ ಬಸ್”ಗೆ ವಿಶೇಷ ಪೂಜೆ

ನಾಳೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರ ಪ್ರಚಾರ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಹಿರಿಯ ನಾಯಕರ ಬಸ್ ಪ್ರವಾಸ

“ಬಿಜೆಪಿ ಪಾಪದ ಪುರಣ” ಆರೋಪ ಪಟ್ಟಿ ಬಿಡುಗಡೆ

ಬಿಜೆಪಿ ೩ ಲಕ್ಷ ಕೋಟಿ ಸಾಲ ಆರೋಪ

ಬಿಜೆಪಿ ಸರ್ಕಾರದ ಹರಗಣ ಜನರಿಗೆ ತಿಳಿಸುವ ಪ್ರಯತ್ನ

ಪ್ರತಿಯೊಂದರಲ್ಲಿಯೂ ಬಿಜೆಪಿ ಸರ್ಕಾರ ಭ್ರಷ್ಟಾಚಾರ-ಆರೋಪ