
ಸಿರವಾರ,ಮಾ.೧೫- ಕೆಪಿಟಿಸಿಎಲ್ ನೌಕರರ ವೇತನ ಹೆಚ್ಚಳ ಸೇರಿ ಇನ್ನಿತರ ಬೇಡಿಕೆಗೆ ಒತ್ತಾಯಿಸಿ ನಾಳೆಯಿಂದ ರಾಜ್ಯಾದ್ಯಂತ ಕೆಲಸಕ್ಕೆ ಗೈರು ಆಗುವ ಮೂಲಕ ಮುಷ್ಕರ ಮಾಡಲಾಗುವುದು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘ( ೬೫೯) ಅಧ್ಯಕ್ಷ ಶಿವಮೂರ್ತಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ೭ ನೇ ವೇತನ ಆಯೋಗ ಜಾರಿಗೆ ಒತ್ತಾಯ, ಕೆಪಿಟಿಸಿಎಲ್ ನೌಕರರ ವೇತನ ೨೦೨೧ ಎಪ್ರೀಲ್‌ನಿಂದ ಹೆಚ್ಚಳವಾಗಬೇಕು. ಆದರೂ ಮಾಡಿಲ್ಲ, ಸರ್ಕಾರಿ ನೌಕರರಿಗೆ ೧೭ % ಮದ್ಯಂತರ ಪರಿಷ್ಕರಣೆ ಮಾಡಲಾಯಿತು. ಎಪ್ರೀಲ್ ೨೦೨೨ ರಲ್ಲಿ ಸಮಿತಿ ರಚನೆ ಮಾಡಿ ೨೨% ವೇತನ ಹೆಚ್ಚಳ ಎಂದು ಹೇಳಲಾಗಿತು. ಆದರೆ ಈಗ ೨೦೨೩ ರಿಂದ ನೀಡುವುದಾಗಿ ಹೇಳುತ್ತಿರುವುದು ವಿಪರ್ಯಾಸವಾಗಿದೆ.
ವೇತನ ಶ್ರೇಣಿ ಹೆಚ್ಚಿಸುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಆಡಳಿತ ಮಂಡಳಿಗೆ ೧೪ ದಿನಗಳ ಹಿಂದೆ ಮುಷ್ಕರ ನೋಟೀಸ್ ಜಾರಿ ಮಾಡಲಾಗಿತ್ತು. ನೋಟೀಸ್ ಜಾರಿ ಮಾಡಿ ಹತ್ತುದಿನಗಳ ಕಳೆದರೂ ಇಲ್ಲಿಯವರೆಗೂ ಸರ್ಕಾರದಿಂದ ನಮ್ಮ ಬೇಡಿಕೆಗಳಿಗೆ ಪೂರಕವಾದ ಸ್ಪಂದನೆ ದೊರೆತಿಲ್ಲ ಎಂದರು.
ಆದ್ದರಿಂದ ಅನಿವಾರ್ಯವಾಗಿ ಈಗಾಗಲೇ ನಿಗದಿಯಾಗಿರುವಂತೆ ಮಾರ್ಚ್ ೧೬ ರಿಂದ ಕೆಪಿಟಿಸಿಎಲ್ ಹಾಗೂ ಜೇಸ್ಕಾಂ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ತಮ್ಮ ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಜನರ ತೊಂದರೆಗೆ ಸರ್ಕಾರ ನೇರ ಹೊಣೆ :
ಸೋಮವಾರದಿಂದ ಈ ಬಗ್ಗೆ ನಮ್ಮ ಎಲ್ಲಾ ನೌಕರರು ಮತ್ತು ಅಧಿಕಾರಿಗಳಿಗೆ ಮುಷ್ಕರದ ರೂಪು ರೇಷೆಗಳನ್ನು ತಿಳಿಸಿಕೊಡಲಿದ್ದು, ವಿದ್ಯುತ್ ನಿಂದ ಸಾರ್ವಜನಿಕರಿಗೆ ಆಗುವ ತೊಂದರೆಗೆ ಸರಕಾರವೇ ಹೊಣೆ. ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಆಗುವ ತೊಂದರೆಗಳಿಗೆ ಕ್ಷಮೆ ಕೇಳುತ್ತೇನೆ. ಆರೋಗ್ಯ, ಆಸ್ಪತ್ರೆ, ಕುಡಿಯುವ ನೀರು ಸರಬರಾಜಿಗೆ ಮಾತ್ರ ತೊಂದರೆಯಾದರೆ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ತಿಮ್ಮಾರೆಡ್ಡಿ, ಕನ್ನಡ ಸಂಘದ ತಾಲೂಕಧ್ಯಕ್ಷ ಪಂಪನಗೌಡ, ಕವಿಪ್ರನಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಪ್ರಭಾಕರ್ ಪಾಟೀಲ್, ಮಹೇಶ ಕುಮಾರ್ ಸೇರಿದಂತೆ ಇತರರಿದ್ದರು.