ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭ ಸಕಲ ಸಿದ್ಧತೆ21 ಕೇಂದ್ರಗಳಲ್ಲಿ 7047 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ : ಬಿಇಓ ಮೋರಟಗಿ

ಅಥಣಿ : ಮಾ.24:ಪ್ರಸಕ್ತ 2023 -24 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಇದೆ ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ಜರುಗಲಿವೆ. ಅಥಣಿ ವಲಯದ 21 ಪರೀಕ್ಷಾ ಕೇಂದ್ರಗಳಲ್ಲಿ 3357 ವಿದ್ಯಾರ್ಥಿಗಳು,3690 ವಿದ್ಯಾರ್ಥಿನಿಯರು ಸೇರಿ ಒಟ್ಟು 7047 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅದಕ್ಕಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಮೋರಟಗಿ ಹೇಳಿದರು.

ಅವರು ಶನಿವಾರ ಅಥಣಿ ಪಟ್ಟಣದಲ್ಲಿರುವ ತಮ್ಮ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅಥಣಿ ಪಟ್ಟಣದಲ್ಲಿ 3 ಕ್ಲಸ್ಟರ್ ಸಹಿತ ಪರೀಕ್ಷಾ ಕೇಂದ್ರಗಳು ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ 18 ಪರೀಕ್ಷಾ ಕೇಂದ್ರಗಳಿದ್ದು. ಸುಮಾರು 360 ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಆಸನ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಸಂದರ್ಭದಲ್ಲಿ ನಕಲು ತಡೆಗಟ್ಟುವ ಉದ್ದೇಶದಿಂದ ಎಲ್ಲಾ ಕೊಠಡಿಗಳಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪೆÇಲೀಸ್ ಭದ್ರತಾ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪರೀಕ್ಷೆ ಮುಗಿದ ನಂತರ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಪರೀಕ್ಷಾ ಕೇಂದ್ರದ ಸುತ್ತಮುತ್ತಲು 200 ಮೀಟರ್ ಸುತ್ತ ಮುತ್ತ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಸಾರ್ವಜನಿಕರು ಈ ಪ್ರದೇಶದಲ್ಲಿ ಅನಧಿಕೃತವಾಗಿ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಹತ್ತಿರವಿರುವ ಜೆರಾಕ್ಸ್ ಅಂಗಡಿಗಳನ್ನು ತೆರೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮಾರ್ಗಾಧಿಕಾರಿಗಳಿಂದ ಪ್ರಶ್ನೆ ಪತ್ರಿಕೆಗಳನ್ನು ಸಿಸಿ ಟಿವಿ ಕ್ಯಾಮೆರಾ ಇರುವ ಕೊಠಡಿಯಲ್ಲಿ ಸ್ವೀಕರಿಸಿ ಅಲ್ಲಿಯೇ ಭದ್ರತೆಯಲ್ಲಿಡುವಂತೆ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರನ್ನು ಒಳಗೊಂಡಂತೆ ಎಲ್ಲಾ ಅಧಿಕಾರಿಗಳು ಮತ್ತು ಕೊಠಡಿ ಮೇಲ್ವಿಚಾರಕರು ಸುಗಮ, ಶಾಂತಿಯುತ ಯಾವುದೇ ಅಹಿತಕರ ಘಟನೆ ಜರುಗದಂತೆ ಶಿಸ್ತಿನಿಂದ ಪರೀಕ್ಷೆ ನಡೆಸಲು ಈಗಾಗಲೇ ಸೂಚಿಸಲಾಗಿದೆ. ಅದರಂತೆ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರೀಕ್ಷಾ ನೋಡಲ್ ಅಧಿಕಾರಿ ನಿರಂಜನ ಬಿರಾದಾರ, ಶಿಕ್ಷಣ ಸಂಯೋಜಕ ಎಸ್ ಪಿ ಸನದಿ, ಕ್ಷೇತ್ರ ಸಮನ್ವಯ ಅಧಿಕಾರಿ ಗೌಡಪ್ಪ ಖೋತ, ಸಮೂಹ ಸಂಪನ್ಮೂಲ ಅಧಿಕಾರಿ ಐ. ಎಸ್ ಹಂಪಣ್ಣವರ, ಸಂಪನ್ಮೂಲ ಅಧಿಕಾರಿ ಎನ್ ಎಂ ಹಿರೇಮಠ, ಜಿ. ಎ. ಖೋತ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.