ನಾಳೆಯಿಂದ ಉಕ್ಕು, ಮೊಬೈಲ್, ಟಿವಿ ದುಬಾರಿ

ನವದೆಹಲಿ,ಮಾ.೩೧- ನಾಳೆಯಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಲಿದ್ದು,ಉಕ್ಕು, ಆಟೋಮೊಬೈಲ್, ಟಿವಿ ಹಾಗೂ ವಿಮಾನ ಪ್ರಯಾಣ ಸೇರಿದಂತೆ ಹಲವು ವಸ್ತುಗಳು ನಾಳೆಯಿಂದ ದುಬಾರಿಯಾಗಲಿವೆ.
ಮುಂಗಡ ಪತ್ರದಲ್ಲಿ ಘೋಷಣೆಯಾದಂತೆ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಪ್ರಕ್ರಿಯೆಯು ಚಾಲನೆ ಸಿಗಲಿದೆ. ಹಳೆಯ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ ಶೇ. ೫ ರಷ್ಟು ರಿಯಾಯಿತಿ ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.
ನೂತನ ವೇತನ ನೀತಿ ಜಾರಿಯಿಂದಾಗಿ ನೌಕರರ ಮೂಲ ವೇತನ ಶೇ. ೫೦ಕ್ಕಿಂತ ಹೆಚ್ಚಿರಬೇಕು. ನೌಕರರಿಗೆ ಸಿಗುವ ಸಂಬಳ ಕಡಿಮಾಯಾಗಲಿದೆ. ತೆರಿಗೆ ಪಾವತಿ ಮಾಡದ ನೌಕರರು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದರೆ ಬಡ್ಡಿಗೆ ವಿಧಿಸುವ ಟಿಡಿಎಸ್ ನಾಳೆಯಿಂದ ದುಪ್ಪಟ್ಟಾಗಲಿದೆ.
ವಿಜಯಾ, ಕಾರ್ಪೋರೇಷನ್, ಓರಿಯಂಟಲ್, ಯುನೈಟೆಡ್, ಅಲಹಾಬಾದ್, ದೇನಾಬ್ಯಾಂಕ್‌ಗಳು ವಿಲೀನಾವಾಗಿರುವುದರಿಂದ ಹಳೆ ಚೆಕ್‌ಬುಕ್‌ಗಳಿಗೆ ಮಾನ್ಯತೆ ಇರುವುದಿಲ್ಲ ಹೀಗಾಗಿ ಗ್ರಾಹಕರು ಹೊಸ ಚೆಕ್‌ಬುಕ್‌ಗಳನ್ನು ಪಡೆಯಬೇಕಾಗಿದೆ.
ಪಾನ್‌ಗೆ ಆಧಾರ್ ಲಿಂಕ್ ಮಾಡಲು ಇಂದು ಕಡೆಯ ದಿನವಾಗಿದ್ದು, ಒಂದು ವೇಳೆ ಲಿಂಕ್ ಮಾಡದಿದ್ದರೆ ಪಾನ್‌ಕಾರ್ಡ್ ಮಾನ್ಯತೆ ರದ್ದಾಗಲಿದ್ದು, ನಿಕ್ಯ ವಹಿಸಿದರೆ ನಾಳೆಯಿಂದ ಸಾವಿರ ರೂ. ದಂಡ ವಿಧಿಸಲಾಗುತ್ತದೆ.ಇಂಟರ್‌ನೆಟ್, ಯುಪಿಐ ಮೂಲಕ ಆಟೋ ಪೇಮೆಂಟ್ ವ್ಯವಸ್ಥೆಗೆ ದೃಢೀಕರಣ ಅಗತ್ಯವಾಗಿದೆ.
ವಿಮಾನಯಾನ ಟಿಕೆಟ್ ದರ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ಏ. ೧ ರಿಂದ ವಿಮಾನ ಪ್ರಯಾಣದ ಟಿಕೆಟ್ ದರಗಳು ದುಬಾರಿಯಾಗಲಿವೆ.
ದೇಶದೊಳಕ್ಕೆ ಸಂಚರಿಸುವ ಪ್ರತಿ ಪ್ರಯಾಣಿಕರಿಗೆ ವಿಮಾನಯಾನ ಭದ್ರತಾಶುಲ್ಕ ೨೦೦ ರೂ. ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ೧೨ ಅಮೆರಿಕನ್ ಡಾಲರ್ ಅಥವಾ ಇದೇ ಮೊತ್ತದ ಭಾರತೀಯ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
ಇದುವರೆಗೆ ೧೬೦ ಮತ್ತು ೫.೨೦ ಡಾಲರ್ ಶುಲ್ಕ ನಿಗದಿ ಮಾಡಲಾಗಿತ್ತು ಎಂದು ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.
ಈ ಭದ್ರತಾ ಶುಲ್ಕ ನಾಳೆಯಿಂದ ಖರೀದಿಸುವ ಟಿಕೆಟ್‌ಗಳಿಗೆ ಅನ್ವಯವಾಗಲಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿಮಾನಯಾನ ಭದ್ರತಾ ಶುಲ್ಕವನ್ನು ಹೆಚ್ಚಳ ಮಾಡಲಾಗುತ್ತಿತ್ತು.ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಳ, ಪ್ರಯಾಣಿಕರು ಹಾಗೂ ಅವರ ಲಗೇಜ್‌ಗಳ ತಪಾಸಣೆ ಸೇರಿದಂತೆ ವಿವಿಧ ಭದ್ರತಾ ಸೇವೆಗಳಿಗೆ ವಿಧಿಸಲಾಗಿರುವ ಭದ್ರತಾಶುಲ್ಕ ನಾಗರೀಕ ವಿಮಾನಯಾನ ನಿಯಂತ್ರಕರು ಹೆಚ್ಚಳ ಮಾಡಿದ್ದು ನಾಳೆಯಿಂದ ವಿಮಾನಯಾನಗಳ ಟಿಕೆಟ್ ದರಗಳು ದುಬಾರಿಯಾಗಲಿದೆ.