ನಾಳೆಯಿಂದ ಅಗತ್ಯ ವಸ್ತುಗಳ ಖರೀದಿಗಾಗಿ ಅವಕಾಶ

ಗದಗ ಜೂ.6: ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಪ್ರಕಟಿಸಿದ ಮಾರ್ಗಸೂಚಿಗಳು ಜೂನ್ 7ರ ಬೆಳಗ್ಗೆ 6 ಗಂಟೆಯಿಂದ ಜೂನ್ 14 ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರಲಿವೆ. ಈ ಅವಧಿಯಲ್ಲಿ ಯಾವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಹಾಗೂ ನಿರ್ಬಂಧಿಸಲಾಗಿದೆ ಎಂಬ ಮಾಹಿತಿಯು ಈ ಕೆಳಕಂಡಂತಿದೆ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಗದಗ ಜಿಲ್ಲೆಯಲ್ಲಿ ಯಥಾವತ್ತಾಗಿ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಮಾರ್ಗಸೂಚಿಗಳ ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.
ಅವಕಾಶ ಕಲ್ಪಿಸಲಾಗಿದೆ: ಬೆ. 6 ರಿಂದ ಬೆ 10 ಗಂಟೆಯವರೆಗೆ ಮಾಂಸ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳು , ಆಹಾರ ಸಾಮಗ್ರಿ, ದಿನಸಿ, ಮಾಂಸ ಮತ್ತು ಮೀನಿನ ಮಳಿಗೆಗಳು ಮತ್ತು ಪಶು ಆಹಾರದ ಮಳಿಗೆಗಳು, ಹಾಲಿನ ಬೂತ್, ಮದ್ಯ ಮಾರಾಟ ಮಳಿಗೆಗಳು ಕೇವಲ ಪಾರ್ಸೆಲ್ ಸೇವೆಗಾಗಿ ಅವಕಾಶ ಕಲ್ಪಿಸಲಾಗಿದೆ.
ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ರೈತರಿಗೆ ಅಗತ್ಯವಿರುವ ಬೀಜ,ಗೊಬ್ಬರ, ಕೀಟನಾಶಕ, ಯಂತ್ರೋಪಕರಣ ಖರೀದಿಗಾಗಿ ಅವಕಾಶ ಕಲ್ಪಿಸಲಾಗಿದೆ.
ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ತಳ್ಳುಗಾಡಿ, ಆಟೋ, ಟಂಟಂಗಳಲ್ಲಿ ಬೀದಿ ಸುತ್ತುವ ಮೂಲಕ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ.
ನಿಗದಿಯಾಗಿರುವ ವಿಮಾನ ಮತ್ತು ರೈಲುಗಳು, ಟ್ಯಾಕ್ಸಿ , ಅಟೋ , ರಿಕ್ಷಾಗಳು ತುರ್ತು ಸಂದರ್ಭಗಳಲ್ಲಿ ಹಾಗೂ ಮಾರ್ಗಸೂಚಿಯಲ್ಲಿ ಅನುಮತಿಸಿದ ರೀತಿಯಲ್ಲಿ:, ಎಲ್ಲ ಸರಕು ಸಾಗಾಣಿಕೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿ; ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಮಳಿಗೆಗಳು , ಪಾರ್ಸೆಲ್ ಹಾಗೂ ಹೋಂ ಡಿಲೆವರಿ ಸೇವೆ ಮಾತ್ರ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಗತ್ಯ ಸೇವೆ ನೀಡುವ ಕಚೇರಿಗಳು ಮಾತ್ರ ಕಾರ್ಯನಿರ್ವಹಿಸಲಿವೆ; ಎಲ್ಲ ಆರೋಗ್ಯ ಸೇವಾ ಸೌಲಭ್ಯಗಳು ಮತ್ತು ಸಂಬಂಧಿತ ಸೇವೆ, ಮೀನುಗಾರಿಕೆ, ಕೋಳಿ ಸಾಕಾಣಿಕೆ, ದಿನದ 24 ಗಂಟೆಯೂ ಅಗತ್ಯ ವಸ್ತುಗಳ ಹೋಂ ಡೆಲಿವರಿ ಸೇವೆಗೆ, ದೂರ ಸಂಪರ್ಕ, ಇಂಟರ್ ನೆಟ್ , ಪ್ರಸಾರ ಮತ್ತು ಕೆಬಲ್ ಸೇವೆಗಳು, ಐಟಿ ಮತ್ತು ಐಟಿಇಎಸ್ ಕಂಪನಿಗಳ ಅಗತ್ಯ ಸಿಬ್ಬಂದಿ ಮಾತ್ರ ಕಚೇರಿಗಳಲ್ಲಿ ಕಾರ್ಯ; (ಇತರ ಸಿಬ್ಬಂದಿ ಮನೆಯಿಂದಲೇ ಕಾರ್ಯ ನಿರ್ವಹಿಸಬೇಕು) ; ಸ್ಥಳದಲ್ಲಿಯೇ ಕಾರ್ಮಿಕರು/ ಸಿಬ್ಬಂದಿ ಲಭ್ಯವಿರುವ ಕೈಗಾರಿಕೆಗಳು/ ಉತ್ಪಾದನಾ ಘಟಕಗಳು; ಸ್ಥಳದಲ್ಲಿಯೇ ಕಾರ್ಮಿಕರು, ಕೆಲಸಗಾರರನ್ನು ಹೊಂದಿರುವ ನಿರ್ಮಾಣ ಚಟುವಟಿಕೆ ಹಾಗೂ ರಸ್ತೆ ಕಾಮಗಾರಿ, ಅಗತ್ಯ ವಸ್ತುಗಳ ತಯಾರಿಕಾ ಘಟಕ; ನಿರಂತರ ಕಾರ್ಯನಿರ್ವಹಣೆಯ ಅಗತ್ಯವಿರುವ ತಯಾರಿಕಾ ಘಟಕ; ನ್ಯಾಯಬೆಲೆ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಂತ್ಯ ಸಂಸ್ಕಾರದಲ್ಲಿ ಗರಿಷ್ಟ 5 ಜನರಿಗೆ; ಮದುವೆ ಸಮಾರಂಭಗಳಲ್ಲಿ ಗರಿಷ್ಟ 40 ಜನರಿಗೆ ಅವಕಾಶ ಕಲ್ಪಿಸಲಾಗಿದೆ.
ಮುಖಗವಸು ಧರಿಸದಿದ್ದರೆ ಅಂತಹವರ ವಿರುದ್ಧ ನಗರ ಪಾಲಿಕೆ ಪ್ರದೇಶಗಳಲ್ಲಿ ರೂ.250 ಮತ್ತು ಇನ್ನಿತರ ಪ್ರದೇಶಗಳಲ್ಲಿ ರೂ.100 ದಂಡವನ್ನು ವಿಧಿಸಲಾಗುವುದು ಹಾಗೂ ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾದಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.