
ಹುಬ್ಬಳ್ಳಿ, ಏ 7: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನಾಳೆ ಸಂಸದೀಯ ಮಂಡಳಿಯಲ್ಲಿ ಅಖೈರಾಗಿ ನಿರ್ಧರಿತವಾಗಲಿದೆ ಎಂದು ಮುಖ್ಯಮಂತ್ರಿ ಜಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ವಿಮಾನನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಕುರಿತು ಕ್ಷೇತ್ರ, ಜಿಲ್ಲಾ ಮಟ್ಟಗಳಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ರಾಜ್ಯಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ನುಡಿದರು.
ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಅಂತಿಮವಾಗಿ ನಿರ್ಧರಿತವಾಗಲಿದ್ದು, ಅದಕ್ಕಾಗಿಯೇ ತಾವು ದೆಹಲಿಗೆ ತೆರಳುತ್ತಿರುವುದಾಗಿ ಅವರು ತಿಳಿಸಿದರು.
ಸಿದ್ಧರಾಮಯ್ಯ ವಿರುದ್ಧ ವಿ. ಸೋಮಣ್ಣ ಸ್ಪರ್ಧೆ ವಿಷಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಅದು ಯಾವುದೂ ತಿರ್ಮಾನವಾಗಿಲ್ಲ. ದೆಹಲಿಯಲ್ಲಿನ ನಾಳಿನ ಸಭೆಯಲ್ಲಿ ಎಲ್ಲ ಕ್ಷೇತ್ರಗಳ ಜೊತೆಗೆ ವರುಣಾ ಕ್ಷೇತ್ರದ ಕುರಿತೂ ಚರ್ಚೆ ನಡೆಯುತ್ತದೆ ಎಂದು ಅವರು ತಿಳಿಸಿದರು.
ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ದೊರಕದಿರುವುದರಿಂದ ಟಿಕೇಟ್ ಆಕಾಂಕ್ಷಿಯಾಗಿದ್ದ ನಾಗರಾಜ ಛಬ್ಬಿ ಬಿಜೆಪಿಗೆ ಬರಲಿದ್ದಾರೆಂಬ ಸುದ್ದಿ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಈ ಬಗ್ಗೆ ತಮಗೇನೂ ಗೊತ್ತಿಲ್ಲ. ಇದುವರೆಗೂ ಛಬ್ಬಿಯವರು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಸಿ.ಎಂ. ಹೇಳಿದರು.
ಬಿಜೆಪಿ ಅಭ್ಯರ್ಥಿ ಪರ ಸುದೀಪ ಪ್ರಚಾರ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಹೇಳಿಕೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ ಹಿಂದೆ ಕುಮಾರಸ್ವಾಮಿ ಯಾವ ಸ್ಟಾರ್ ನಟರನ್ನೂ ನಿಲ್ಲಿಸಿರಲಿಲ್ಲವೇ ? ಎಂದು ಖಾರವಾಗಿಯೇ ಪ್ರಶ್ನಿಸಿದರು. 1996 ರಲ್ಲಿ ರಾಮನಗರ ಉಪಚುನಾವಣೆಯಲ್ಲಿ ಅಂಬರೀಶ್‍ರನ್ನು ಕರೆದುಕೊಂಡು ಬಂದು ಪ್ರಚಾರ ಮಾಡಿದ್ದಾರೆ. ನಾನೇ ಅಂಬರೀಶರನ್ನು ಕರೆದುಕೊಂಡು ಬಂದು ಪ್ರಚಾರ ಮಾಡಿದ್ದೇನೆ ಎಂದರು.
ನಟರು ರಾಜಕೀಯ ಪಕ್ಷಗಳಿಗೆ ಬೆಂಬಲ ಕೊಡುವುದು ಹೊಸದೇನಲ್ಲ. ಎಲ್ಲ ಪಕ್ಷಗಳಿಗೂ ಬೆಂಬಲ ಕೊಟ್ಟಿದ್ದಾರೆ. ಇದು ಇಡೀ ದೇಶÀದಲ್ಲೂ ಇದೆ. ಹಾಗೆಯೇ ಕರ್ನಾಟಕದಲ್ಲೂ ಇದೆ ಎಂದು ಬೊಮ್ಮಾಯಿ ಹೇಳಿದರು.
ನಮ್ಮ ಜೊತೆಗೆ ಸೂಪರ್ ಸ್ಟಾರ್ ಬಂದರೆ ಇವರಿಗೇಕೆ ಕಳವಳ? ಎಂದು ಪ್ರಶ್ನಿಸಿದ ಅವರು ಆತಂಕವಿರುವುದರಿಂದಲೇ ಹೀಗೆ ಟೀಕೆ ಮಾಡುತ್ತಿದ್ದಾರೆ. ಅವರ ಸೋಲು ಗೋಡೆ ಮೇಲೆ ಬರೆದಿದೆ. ಅದನ್ನೇ ನೋಡುತ್ತಿದ್ದಾರೆ. ನಮಗೆ ಗೆಲುವಿನ ವಿಶ್ವಾಸವಿದೆ ಎಂದು ನಗುತ್ತಲೇ ನುಡಿದರು.