ನಾಳಿನ ಬಂದ್‍ಗೆ ರೈತ ಸಂಘ ಹಸಿರು ಸೇನೆ ಬೆಂಬಲ


ಬ್ಯಾಡಗಿ,ಸೆ.26: ಕೃಷಿ ವಿರೋಧಿ ಕಾಯಿದೆಗಳ ರದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಸೆ.27ರಂದು ಕರೆ ನೀಡಿರುವ ಭಾರತ್ ಬಂದ್‍ಗೆ ಬ್ಯಾಡಗಿ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಬಂದ್’ಗೆ ಕರೆ ನೀಡಲಾಗಿದೆ ಎಂದು ಹಸಿರುಸೇನೆಯ ತಾಲೂಕಾಧ್ಯಕ್ಷ ಗಂಗಣ್ಣ ಎಲಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಬಂದ್’ಗೆ ರೈತರು, ಕೂಲಿಕಾರ್ಮಿಕರು, ವಿದ್ಯಾರ್ಥಿ ಸಂಘಟನೆಗಳು, ಹಮಾಲರು, ಎಪಿಎಂಸಿ ವ್ಯಾಪಾರಸ್ಥರು, ಮಹಿಳಾ ಸಂಘಟನೆಗಳು ಸಹ ಬೆಂಬಲ ವ್ಯಕ್ತಪಡಿಸಿದ್ದು, ಸೆ. 27ರ ಸೋಮವಾರ ಬೆಳಿಗ್ಗೆ 9 ಗಂಟೆಗೆ ವೀರಭದ್ರೇಶ್ವರ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ನಂತರ ತಹಸೀಲ್ದಾರಗೆ ಮನವಿ ನೀಡುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಕಿರಣ ಗಡಿಗೋಳ, ಚಿಕ್ಕಪ್ಪ ಛತ್ರದ, ಪ್ರಕಾಶ ಶಿದ್ದಪ್ಪನವರ, ಬಿ.ಎಸ್.ಪಾಟೀಲ ಇದ್ದರು.