ನಾಲ್ವರ ಬಂಧನ: 12 ಬೈಕ್ ಗಳು ವಶಕ್ಕೆ

ಬೀದರ:ಮಾ.30: ನಗರದ ಗಾಂಧಿ ಗಂಜ್‌ ಪೊಲೀಸರು ನಾಲ್ವರನ್ನು ಬಂಧಿಸಿ ಕಳ್ಳತನ ಮಾಡಿದ್ದ ₹5 ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೀದರ್‌ ತಾಲ್ಲೂಕಿನ ನಂದಗಾಂವದ ಶೇಖ ಪುರ್ಕಾನ್‌ ಅಬ್ದುಲ್‌ ಖಯಮ್‌ ಶೇಖ, ಜಾರ್ಜ್ ನರಸಪ್ಪ ಬಾರೆನೋರ್, ಮಹಮ್ಮದ್ ಅಮೀರ್ ಬಾಬುಮಿಯಾ ಸೇರಿಕೊಂಡು ಬೈಕ್‌ ಕಳ್ಳತನ ಮಾಡಿ ಒಂದೇ ವಾಹನದಲ್ಲಿ ಹೊರಟಿದ್ದರು. ಇವರನ್ನು ತಡೆದು ವಿಚಾರಿಸಿದಾಗ ವಾಹನದ ದಾಖಲೆ ತೋರಿಸಿರಲಿಲ್ಲ.

ಆರೋಪಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ನೆರೆಯ ರಾಜ್ಯಗಳಲ್ಲಿ ಬೈಕ್‌ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಕಳ್ಳತನದ ಬೈಕ್‌ ಖರೀದಿಸಿದ್ದ ಬೀದರ್‌ ತಾಲ್ಲೂಕಿನ ದಿನೇಶ ಯೇಶಪ್ಪ ಅವರನ್ನೂ ಬಂಧಿಸಲಾಗಿದೆ. ಆರೋಪಿಗಳಿಂದ ಒಟ್ಟು 12 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.2018ರ ಡಿಸೆಂಬರ್ 23ರಂದು ನವೀದ್‌ಖಾನ್‌ ವಹೀದ್‌ಖಾನ್ ತಮ್ಮ ದ್ವಿಚಕ್ರ ವಾಹನ ಕಳ್ಳತನವಾದ ಬಗ್ಗೆ ಗಾಂಧಿ ಗಂಜ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೋಳಿ ಹಬ್ಬದ ಸಂದರ್ಭದಲ್ಲಿ ಬೈಕ್‌ಗಳ ಮೇಲೆ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದವರನ್ನು ತಡೆದು ವಿಚಾರಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.