
ಮುಂಬೈ (ಮಹಾರಾಷ್ಟ್ರ), ಮಾ.೧೨- ಗೋದಾವರಿ ನದಿಯಲ್ಲಿ ಮುಳುಗಿ ನಾಲ್ವರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಛತ್ರಪತಿ ಸಂಭಾಜಿ ನಗರದ ಸಮೀಪ ನಡೆದಿದೆ.
ಮೃತರನ್ನು ವೈಜಾಪುರ ತಾಲೂಕಿನ ಪಾಲ್ಖೇಡ್ ಗ್ರಾಮದ ಬಾಬಾಸಾಹೇಬ್ ಅಶೋಕ್ ಗೋರ್ (೩೫), ನಾಗೇಶ್ ದಿಲೀಪ್ ಗೋರ್ (೨೦), ಅಕ್ಷಯ್ ಭಾಗಿನಾಥ್ ಗೋರ್ (೨೦) ಹಾಗೂ ಶಂಕರ ಪರಸ್ನಾಥ್ ಘೋಡ್ಕೆ (೨೨) ಎಂದು ಗುರುತಿಸಲಾಗಿದೆ.
ಮೃತರ ನಾಲ್ವರು ಯುವಕರು ಕೂಡ ವೈಜಾಪುರ ತಾಲೂಕಿನ ಪಾಲ್ಖೇಡ್ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಛತ್ರಪತಿ ಸಂಭಾಜಿ ನಗರದ ಪುಣೆ ಹೆದ್ದಾರಿ ಬಳಿಯ ಕಾಯಗಾಂವ್ ತೋಕೆ ಸಮೀಪದ ಸಿದ್ಧೇಶ್ವರ ದೇವಸ್ಥಾನದ ಬಳಿಯಿರುವ ಗೋದಾವರಿ ನದಿಗೆ ನಿನ್ನೆ ಸಂಜೆ
ಇಳಿದಿದ್ದರು. ಈ ವೇಳೆ ನದಿ ನೀರಿನ ಆಳ ತಿಳಿಯದೇ ನಾಲ್ವರು ಕೂಡ ಮುಳುಗಿದ್ದಾರೆ. ವಿಷಯ ತಿಳಿದ ಸ್ಥಳೀಯರು ತಕ್ಷಣವೇ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಈ ವೇಳೆ ಶಂಕರ ಘೋಡ್ಕೆ ಮೃತದೇಹ ಪತ್ತೆಯಾಗಿದೆ. ಆದರೆ, ಉಳಿದ ಇನ್ನೂ ಮೂವರ ಶವಗಳು ದೊರೆತಿಲ್ಲ.ಮತ್ತೆ ಇಂದು ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆಯಲಾಗಿದೆ.