ನಾಲ್ವರು ಮೊಬೈಲ್ ಸುಲಿಗೆಕೋರರ ಬಂಧನ

ಕಲಬುರಗಿ,ಮೇ.24-ಸಾರ್ವಜನಿಕರಿಂದ ಮೊಬೈಲ್ ಮತ್ತು ಟ್ಯಾಬ್ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ತಿಳಿಸಿದರು.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಫಿಲ್ಟರ್ ಬೆಡ್ ಆಶ್ರಯ ಕಾಲೋನಿಯ ಅಭಿಷೇಕ ತಂದೆ ಮಲ್ಲಿಕಾರ್ಜುನ ಯರಗಲ್ (22), ಆಕಾಶ ತಂದೆ ದೀಪರಾಜ ವಾಘಮೋರೆ (22), ಶಹಾಬಜಾರ ತಾಂಡಾದ ಕಾರ್ತಿಕ ತಂದೆ ವಿಶ್ವನಾಥ ಆಡೆ (18) ಮತ್ತು ವಿವೇಕ ತಂದೆ ರಮೇಶ ಪವಾರ (21) ಎಂಬುವವರನ್ನು ಬಂಧಿಸಿ 1.50 ಲಕ್ಷ ರೂ.ಮೌಲ್ಯದ 6 ವಿವಿಧ ಕಂಪನಿಯ ಮೊಬೈಲ್ ಮತ್ತು ಟ್ಯಾಬ್ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಆಳಂದ ರಸ್ತೆಯ ದೇವಿ ನಗರದ ಮಲ್ಲಿಕಾರ್ಜುನ ಚೋಳಾಭರ್ದಿ (21) ಅವರು ಸಹೋದರ ಮಾವನ ಮಗ ಭಾರ್ಗವ ವಗದುರ್ಗಿ (21) ಜೊತೆ ಏಪ್ರಿಲ್ 6 ರಂದು ರಾತ್ರಿ 9.20ರ ಸುಮಾರಿಗೆ ರಾಮತೀರ್ಥ ಪಕ್ಕದ ಅಯೋಧ್ಯ ನಗರದಲ್ಲಿರುವ ಅಜ್ಜಿ ಮನೆಗೆ ಬೈಕ್ ಮೇಲೆ ಹೋಗುತ್ತಿದ್ದಾಗ ಬೈಕ್ ಮೇಲೆ ಬಂದ 18 ರಿಂದ 25 ವರ್ಷದೊಳಗಿನ 5 ಜನ ಇವರನ್ನು ಅಡ್ಡಗಟ್ಟಿ ಹೆದರಿಸಿ ಇವರ ಹತ್ತಿರವಿದ್ದ ಸ್ಯಾಮಸಂಗ್ ಕಂಪನಿಯ ಕಪ್ಪು ಬಣ್ಣದ 12 ಸಾವಿರ ರೂಪಾಯಿ ಮೌಲ್ಯದ ಟ್ಯಾಬ್ ಕಸಿದುಕೊಂಡು ಹೋಗಿದ್ದರು. ಈ ಸಂಬಂಧ ಮಲ್ಲಿಕಾರ್ಜುನ ಮೇ.23 ರಂದು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಉಪ ಪೊಲೀಸ್ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಐ.ಎ.ಚಂದ್ರಪ್ಪ, ಸಬ್-ಅರ್ಬನ್ ಉಪ ವಿಭಾಗದ ಎಸಿಪಿ ಗೀತಾ ಬೇನಾಳ ಅವರ ಮಾರ್ಗದರ್ಶನದಲ್ಲಿ ಸಬ್-ಅರ್ಬನ್ ಪೊಲೀಸ್ ಠಾಣೆ ಪಿ.ಐ. ಬಸವರಾಜು ಅವರ ನೇತೃತ್ವದಲ್ಲಿ ಪಿಎಸ್‍ಐ ಸುರೇಶ ಅಜ್ಜರಗಿ, ಎ.ಎಸ್.ಐ. ನಾಗರಾಜ, ಸಿಬ್ಬಂದಿಗಳಾದ ಅಶೋಕ, ಸಿರಾಜ ಪಟೇಲ್, ಮಲ್ಲಿಕಾರ್ಜುನ, ಅನೀಲ, ನಾಗೇಂದ್ರ, ಪ್ರಕಾಶ ಮತ್ತು ಅನೀಲ ರಾಠೋಡ್ ಅವರನ್ನೊಳಗೊಂಡ ಪ್ರತ್ಯೇಕ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.
ಮೊಬೈಲ್ ಸುಲಿಗೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪ ಪೊಲೀಸ್ ಆಯುಕ್ತ ಐ.ಎ.ಚಂದ್ರಪ್ಪ ಮತ್ತು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸಂತೋಷ ಬನಹಟ್ಟಿ ಉಪಸ್ಥಿತರಿದ್ದರು.