ನಾಲ್ವರು ಆರೋಪಿಗಳ ಬಂಧನ: 17 ಬೈಕ್ ಜಪ್ತಿ

ಔರಾದ್:ಎ.30: ಜಿಲ್ಲೆಯ ವಿವಿಧೆಡೆ ಬೈಕ್ ಕಳ್ಳತನ ಮಾಡಿದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಇಲ್ಲಿಯ ಪೊಲೀಸ್ ತಂಡ ಯಶಸ್ವಿಯಾಗಿದೆ.

ಶಿವಾಜಿ ವಲ್ಲೆವಾಡೆ, ಶಿವಯ್ಯ, ಸಚಿನ್, ಗೋವಿಂದ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಇವರಿಂದ 17 ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ. ಈ ನಾಲ್ವರು ಕಮಲನಗರ ತಾಲ್ಲೂಕಿನವರು ಎಂದು ಗೊತ್ತಾಗಿದೆ. ಕಳೆದ ಕೆಲ ತಿಂಗಳಿನಿಂದ ಇವರು ಔರಾದ್, ಭಾಲ್ಕಿ, ಬೀದರ್, ಉದಗೀರ್ ಪಟ್ಟಣಗಳಲ್ಲಿ ಬೈಕ್ ಕಳ್ಳತನ ಮಾಡಿದ್ದರು.

ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಆರೋಪಿ ಶಿವಾಜಿ ಎಂಬಾತ ಔರಾದ್ ಪಟ್ಟಣದಲ್ಲಿ ಮಹಿಳೆಯಬ್ಬರ ಕೊರಳಲ್ಲಿನ ಚಿನ್ನದ ಸರ ಕದ್ದು ಪರಾರಿ ಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ದೇವರಾಜ ನೇತೃತ್ವದಲ್ಲಿ ಸಿಪಿಐ ರವೀಂದ್ರನಾಥ, ಪಿಎಸ್‍ಐ ಮಂಜುನಾಥ ಅವರ ತಂಡ ಈ ಬೈಕ್ ಕಳ್ಳರನ್ನು ಬಂಧಿಸಿದೆ.