ನಾಲ್ವಡಿ ಮುಂದಿನ ಪೀಳಿಗೆಗೂ ತಿಳಿಸುವ ಕೆಲಸ ಆಗಲಿ: ಜಿ.ಟಿ.ದೇವೇಗೌಡ

ಸಂಜೆವಾಣಿ ನ್ಯೂಸ್
ಮೈಸೂರು: ಡಿ.03:- ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯನವರ ಕೊಡುಗೆಗಳ ಬಗ್ಗೆ ಮುಂದಿನ ಪೀಳಿಗೆಗೂ ತಿಳಿಸುವ ಕೆಲಸ ಆಗಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಮರಡಿಲಿಂಗೇಶ್ವರ ಪ್ರಕಾಶನ, ಅಮೃತೇಶ್ವರ ಪ್ರಕಾಶನವು ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ.ಸುಮಿತ್ರಾ ರಾಜಶೇಖರ್ ಅವರ ಮಳವಳ್ಳಿಯ ಇತಿಹಾಸ ಮತ್ತು ಸಂಸ್ಕೃತಿ, ಸರ್ ಎಂ. ವಿಶ್ವೇಶ್ವರಯ್ಯನವರ ಜೀವನ ಮತ್ತು ಸಾಧನೆಗಳು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮೈಸೂರನ್ನು ಆಳಿದ ನಾಲ್ವಡಿಯವರು ಹಾಗೂ ಮುಖ್ಯ ಎಂಜಿನಿಯರ್, ನಂತರ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರು ನಾಡಿಗೆ ಕನ್ನಂಬಾಡಿ ಕಟ್ಟೆ ನಿರ್ಮಾಣ ಸೇರಿದಂತೆ ಹಲವಾರು ಕೊಡುಗೆಗಳನ್ನು ಕೊಟ್ಟಿದ್ದಾರೆ. ಅವುಗಳ ಬಗ್ಗೆ ಈಗಿನ ಯುವ ಪೀಳಿಗೆಗೂ ತಿಳಿಸುವ ಕೆಲಸ ಆಗಬೇಕು. ನಾಲ್ವಡಿಯವರು, ವಿಶ್ವೇಶ್ವರಯ್ಯ ಅವರು ಏನೆಲ್ಲಾ ಸಾಹಸ, ಸಾಧನೆ ಮಾಡಿದ್ದಾರೆ ಎಂಬುದನ್ನು ತಿಳಿದುಕೊಂಡರೆ ಯುವಪೀಳಿಗೆ ಕೂಡ ಸ್ಫೂರ್ತಿ ಪಡೆದು ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಲೇಖಕಿ ಡಾ.ಸುಮಿತ್ರಾ ಅವರು ತಂದೆ- ತಾಯಿಯನ್ನು ವೇದಿಕೆಯಲ್ಲಿ ಕೂರಿಸಿ, ಕೃತಿಗಳನ್ನು ಬಿಡುಗಡೆ ಮಾಡಿಸಿರುವುದು ಉತ್ತಮ ಸಂಸ್ಕಾರ ಎಂದು ಶ್ಲಾಘಿಸಿದರು.
ಮಳವಳ್ಳಿಯ ಇತಿಹಾಸ ಮತ್ತು ಸಂಸ್ಕೃತಿ ಕೃತಿ ಕುರಿತು ಮೈವಿವಿ ಇತಿಹಾಸ ವಿಭಾಗದ ಅಧ್ಯಕ್ಷ ಪೆÇ್ರ.ವೈ.ಎಚ್. ನಾಯಕವಾಡಿ ಮಾತನಾಡಿ, ಚಾರಿತ್ರಿಕ, ಸ್ಥಾನಿಕ, ಪ್ರಾದೇಶಿಕ ಕುರಿತು ಸೂಕ್ಷ್ಮ ಅಧ್ಯಯನ ಅಷ್ಟು ಸುಲಭವಲ್ಲ. ಆದರೆ ಡಾ.ಸುಮಿತ್ರ ಅವರು ಭೌಗೋಳಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಆಡಳಿತಾತ್ಮಕ ವಿಷಯಗಳನ್ನು ಪರಾಮರ್ಶಿಸಿ, ಶಾಸನಗಳು, ಗಂಗರು, ಚೋಳರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ಮೈಸೂರು ಅರಸರು, ಹೈದರಾಲಿ, ಟಿಪ್ಪು ತನಕವೂ ಅಧ್ಯಯನ ಮಾಡಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಸಚಿವ ಪೆÇ್ರ.ಕೆಎಲ್.ಎನ್. ಮೂರ್ತಿ ಮಾತನಾಡಿ ಪುಸ್ತಕ ಬರೆಯುವಪರು, ಓದುವವರು ವಿರಳವಾಗುತ್ತಿದ್ದಾರೆ. ಯುವಕರು ಮೊಬೈಲ್‍ನಲ್ಲಿ ಮುಳುಗಿದ್ದಾರೆ ಎಂದು ವಿಷಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಳವಳ್ಳಿಯ ಸಾಹಿತಿ ಮ.ಸಿ. ನಾರಾಯಣ ಆಶಯ ಭಾಷಣ ಮಾಡಿದರು. ಡಿ.ಚಂದ್ರಮ್ಮ, ಕೆ. ಕೆಂಪಯ್ಯ, ಪ್ರಕಾಶಕಿ ಐ.ಎನ್. ತ್ರಿವೇಣಿ, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಚೀಲೂರು ಚಂದ್ರಶೇಖರ್ ಇದ್ದರು. ಸಂಗೀತ ವಿದ್ವಾನ್ ರಘು ಪ್ರಾರ್ಥಿಸಿದರು.ಡಾ.ಅವರೆಕಾಡು ವಿಜಯಕುಮಾರ್ ಸ್ವಾಗತಿಸಿದರು. ಡಾ.ಡಿ.ಸುಂದರಿ ನಿರೂಪಿಸಿದರು. ಡಾ.ದಿಲೀಪ್ ವಂದಿಸಿದರು.