ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ

Oplus_0

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.05: ಮೈಸೂರು ರಾಜ್ಯದ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಮತ್ತು ಆಡಳಿತ ವೈಖರಿ ಇಂದಿನ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ತಿಲಕ್‍ರಾಜ್ ತಿಳಿಸಿದರು.
ಪಟ್ಟಣದ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಮತ್ತು ಸರ್ವಜನರ ಅಭಿವೃದ್ದಿಗಾಗಿ
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಪಾರವಾಗಿ ಶ್ರಮಿಸಿದ್ದಾರೆ. ರಾಜಾಡಳಿತ ವ್ಯವಸ್ಥೆಯಲ್ಲಿ ಮೈಸೂರು ಒಡೆಯರ ಮನೆತನದ ಸಾಧನೆಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವಧಿಯಲ್ಲಿ ಏಷ್ಯ ಖಂಡವೇ ಅಚ್ಚರಿಗೊಳ್ಳುವಂತಹ ಅಭಿವೃದ್ಧಿ ಯೋಜನೆಗಳು ರೂಪುಗೊಂಡಿದ್ದವು ಎಂದು ಸ್ಮರಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ವಿಶೇಷ ಕಾಳಜಿ ವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ ಸಂಸ್ಥಾಪನೆಗೊಳ್ಳಲು ಪ್ರಮುಖ ಕಾರಣರಾದರು. ಅಂದಿನಿಂದ ಇಂದಿನವರೆಗೂ ಹಲವು ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೆರವಾಗಿದ್ದಾರೆ ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ: ಶಿಕ್ಷಣ ಮತ್ತು ರಂಗಕಲೆ ಕ್ಷೇತ್ರಗಳಲ್ಲಿ ಸಿ.ಪಿ.ಪುರುಷೋತ್ತಮ್, ಸೇವಾ ಕ್ಷೇತ್ರದಲ್ಲಿ ಶಿಕ್ಷಕರ ಭವನ ಸುರೇಶ್, ಶಿಕ್ಷಣ ಕ್ಷೇತ್ರದಲ್ಲಿ ಅವನಿತ ಚೇತನ, ಕೆ.ಎಸ್. ರಾಹುಲ್, ಕೆ.ಎಸ್.ಸಾಧನ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಕೆ.ಆರ್.ದಿನೇಶ್, ಜಿಲ್ಲಾ ಜನ ಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಕೆ.ಎಸ್.ರಾಜೇಶ್, ಆರ್‍ಟಿಒ ಮಲ್ಲಿಕಾರ್ಜುನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗಂಜಿಗೆರೆ ಮಹೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಸ್.ಧರ್ಮಪ್ಪ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್, ತಾಲ್ಲೂಕು ಜಾನಪದ ಪರಿಷತ್ತು ಅಧ್ಯಕ್ಷ ಕತ್ತರಘಟ್ಟ ವಾಸು, ಉಪನ್ಯಾಸಕರಾದ ಡಿಂಕಾ ಮಹೇಶ್, ಮಂಜೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.