ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ


ಬ್ಯಾಡಗಿ,ಜೂ.5: ಆದರ್ಶ ರಾಜ್ಯದ ಪರಿಕಲ್ಪನೆಯನ್ನು ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ತಂದ ಕೀರ್ತಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ತಾಲೂಕಾ ಕಸಾಪ ಅಧ್ಯಕ್ಷ ಬಿ.ಎಂ.ಜಗಾಪುರ ತಿಳಿಸಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ನಡೆದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 139ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರೇಮಿಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಶೈಕ್ಷಣಿಕ, ಕೈಗಾರಿಕಾ ವಲಯ, ನೀರಾವರಿ, ಸಾರಿಗೆ, ಸಾಹಿತ್ಯ ಹಾಗೂ ಕೃಷಿ ಮೊದಲಾದ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪಾರವಾಗಿದೆ. ಜನರಿಗೆ ಅವಶ್ಯವಾದದ್ದನ್ನು ಮನಗೊಂಡು ಜನರ ಹಿತಾಸಕ್ತಿ ಹಾಗೂ ಶ್ರೇಯೋಭಿವೃದ್ಧಿಗಾಗಿ ಆಡಳಿತ ನಡೆಸಿದ್ದಾರೆ. ಸ್ತ್ರೀಯರ ಬದುಕನ್ನು ಹಸನು ಮಾಡುವ ದೃಷ್ಟಿಯಿಂದ ದೇವದಾಸಿ ಪದ್ಧತಿ, ಗೆಜ್ಜೆಪೂಜೆ ತಡೆಗಟ್ಟಲು ಕಾನೂನು ರೂಪಿಸಿ ಅನುಷ್ಠಾನಗೊಳಿಸಿದ್ದರಲ್ಲದೇ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಜ್ಞಾನ ಗಳಿಸಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ನೂರಾರು ಶಾಲಾ ಕಾಲೇಜುಗಳನ್ನು ತೆರೆದು ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ತಿಳಿಸಿದರು.
ಕಾಲೇಜು ಪ್ರಾಧ್ಯಾಪಕ ಡಾ.ಎಸ್.ಜಿ.ವೈದ್ಯ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿನ ಆಡಳಿತ ನೀತಿಯು ದುರ್ಬಲ ವರ್ಗಗಳಿಗೆ ಶಿಕ್ಷಣ ನೀಡಿ ಆರ್ಥಿಕ ಪ್ರಗತಿ ಸಾಧಿಸುವ ಮೂಲಕ ಜಗತ್ತಿಗೆ ಮಾದರಿಯಾಗಿದೆ. ಉತ್ತಮ ಆಡಳಿತ ನಿರ್ವಹಣೆ ದೃಷ್ಟಿಯಿಂದ ರೈತರು, ವರ್ತಕರು, ಗ್ರಾಮೀಣರು, ಅಲ್ಪ ಸಂಖ್ಯಾಂತರು, ಹಿಂದುಳಿದ ವರ್ಗದವರು ಸೇರಿದಂತೆ ಜನಪ್ರತಿನಿಧಿಗಳಿಂದ ಕೂಡಿದ ಪ್ರಜಾಪ್ರತಿನಿಧಿ ಸಭೆಯನ್ನು ರಚಿಸಿದ್ದು, ಭಾರತದಲ್ಲೇ ಮೊದಲ ಪ್ರಜಾಪ್ರತಿನಿಧಿ ಸಭೆಯಾಗಿತ್ತು ಎಂದರಲ್ಲದೇ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆದರ್ಶಗಳು ಹಾಗೂ ಅಭಿವೃದ್ಧಿಗಾಗಿ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಇಂದಿನ ಯುವಕರು ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ, ಪರಿಷತ್ತಿನ ತಾಲೂಕಾ ಉಪಾಧ್ಯಕ್ಷ ಸುರೇಶ ಅಸಾದಿ. ಸಂಘಟನಾ ಕಾರ್ಯದರ್ಶಿಗಳಾದ ಗಿರೀಶ ಇಂಡಿಮಠ, ರಾಜಶೇಖರ ಹೊಸಳ್ಳಿ, ಪರಿಷತ್ತಿನ ಪದಾಧಿಕಾರಿಗಳಾದ ಎಂ.ಎ.ಪಠಾಣ ಕಾರ್ಯದರ್ಶಿ ಎಸ್.ಬಿ.ಇಮ್ಮಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.