ನಾಲ್ಕೈದು ದಿನಗಳಲ್ಲಿ ರೈತರ ಖಾತೆಗೆ ಪರಿಹಾರ ಹಣ ಜಮಾ ಮಾಡಿ: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್:ಮಾ.23: ಮುಖ್ಯಮಂತ್ರಿಗಳು ಬೆಳೆ ಹಾನಿ ಪರಿಹಾರಕ್ಕಾಗಿ ಮಂತ್ರಿಗಳ ಹೆಸರು ಹೇಳಬಾರದು. ಕೂಡಲೇ ನಾಲ್ಕೈದು ದಿನಗಳಲ್ಲಿ ರೈತರ ಖಾತೆಗಳಿಗೆ ಪರಿಹಾರದ ಹಣವನ್ನು ಜಮಾ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಡಬಾಳ, ನಾಗನಕೇರಾ, ನಿರ್ಣಾ, ಮನ್ನಾಎಖೇಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಿಗೆ ಸೋಮವಾರ ಭೇಟಿ ನೀಡಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಮತ್ತು ಆಣೆಕಲ್ಲುಗಳಿಂದ ಹಾನಿಗೊಳಗಾದ ಉಳ್ಳಾಗಡ್ಡಿ, ಮಾವು, ಟೊಮ್ಯಾಟೊ, ಜೋಳ, ಹೀರೇಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ವೀಕ್ಷಿಸಿ ಅವರು ಮಾತನಾಡಿದರು.
ನಾನು ಎರಡು ದಿನಗಳಿಂದ ಸುಮಾರು ಹಳ್ಳಿಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಹಾನಿಯನ್ನು ಗಮನಿಸಿದ್ದೇನೆ. ಹೀರೇಕಾಯಿ ಬೆಳೆದ ರೈತನ ತೋಟಕ್ಕೆ ಬಂದು ನೋಡಿದ್ದಿನಿ. ಎರಡೇ ಎರಡು ದಿನಗಳಲ್ಲಿ ಕಟಾವು ಮಾಡಬೇಕಿದ್ದ ಬೆಳೆ ಸಂಪೂರ್ಣ ಹಾಳಾಗಿದೆ. ಇದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಹೀರೇಕಾಯಿ, ಇರುಳಿ, ಟೊಮ್ಯಾಟೊ, ಜವೆ ಗೋದಿ, ಜೋಳ, ಮಾವು ಸೇರಿದಂತೆ ಅನೇಕೆ ಬೆಳೆಗಳು ಸಂಪೂರ್ಣ ಹಾಳಾಗಿವೆ.
ಸರ್ಕಾರ ಎನ್.ಡಿ.ಆರ್.ಎಫ್ ನಾರ್ಮ್ ಮೇಲೆ ಹೋಗಬಾರದು. ಅದು ಬಹಳಷ್ಟು ಕಡಿಮೆ ಇದೆ. ಕೃಷಿ ಬೆಳೆಗಳಿಗೆ ಎಕರೆಗೆ 25 ಸಾವಿರ ರೂ. ತೋಟಗಾರಿಕೆ ಬೆಳೆಗಳಿಗೆ ಎಕರೆಗೆ 50 ಸಾವಿರ ರೂ. ಪರಿಹಾರ ಧನವನ್ನು ನೀಡಬೇಕು. ಆಗಾದರೆ ಮಾತ್ರ ರೈತರು ಉಸಿರಾಡಲು ಸಾಧ್ಯವಾಗುತ್ತದೆ. ಸದ್ಯ ರೈತರು ಬಹಳಷ್ಟು ಆತಂಕದಲ್ಲಿದ್ದಾರೆ. ನಮ್ಮ ಭಾಗದಲ್ಲಿ ಆಣೆಕಲ್ಲಿನಿಂದ ಅನೇಕ ಬೆಳೆಗಳು ಹಾನಿಯಾಗಿವೆ. ಮುಖ್ಯಮಂತ್ರಿಗಳು ರೈತರ ಪರವಾಗಿ ಧಾವಿಸಿ ಬರಬೇಕು. ರೈತರಿಗೆ ಕೂಡಲೇ ನಾಲ್ಕೈದು ದಿನಗಳಲ್ಲಿ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರಕ್ಕೆ ಮನವಿ ಮಾಡಿದರು.