ನಾಲ್ಕು ವರ್ಷದ ಪದವಿ ರದ್ದು: ಶಿಕ್ಷಣ ಉಳಿಸಿ ಸಮಿತಿ ಸಂತಸ

ಕಲಬುರಗಿ:ಮೇ.09:ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಗೆ ಭಾರವಾಗಿದ್ದ ನಾಲ್ಕು ವರ್ಷದ ಪದವಿಯನ್ನು ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿಯ ಆಧಾರದ ಮೇಲೆ ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ ಹಾಗೂ ಅಭಿನಂದನಾರ್ಹವಾಗಿದೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಅವರು ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರವು ಯಾವುದೇ ಜನತಾಂತ್ರಿಕ ಚರ್ಚೆಗಳಿಲ್ಲದೇ, ಪೂರ್ವತಯಾರಿಗಳಿಲ್ಲದೇ ಏಕಾಏಕಿ ರಾಜ್ಯದಲ್ಲಿ 4 ವರ್ಷದ ಪದವಿಯನ್ನು ಹೇರಲಾಯಿತು. ಇದರಿಂದಾಗಿ ಇಡೀ ಉನ್ನತ ಶಿಕ್ಷಣ ವ್ಯವಸ್ಥೆಯು ಅಸ್ತವ್ಯಸ್ಥಗೊಂಡು, ಅರಾಜಕ ಸ್ಥಿತಿಗೆ ಬಂದೊದಗಿತು. ಇದರ ವಿರುದ್ದ ರಾಜ್ಯದಲ್ಲಿ ನಮ್ಮ ಸಂಘಟನೆಯು ಪ್ರಾರಂಭದ ಹಂತದಲ್ಲಿಯೇ ಹೋರಾಟಗಳನ್ನು ಕೈಗೊಂಡಿತು. ದೇಶದ ಹಾಗೂ ರಾಜ್ಯದ ಹಲವಾರು ಶಿಕ್ಷಣ ತಜ್ಞರು, ಬುದ್ದಿಜೀವಿಗಳು, ಸಾಹಿತಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪಾಲಕ ಪೋಷಕರನ್ನು ಸಂಘಟಿಸುತ್ತಾ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವಾರು ಹೋರಾಟ, ಕಾರ್ಯಕ್ರಮ, ಸಮಾವೇಶಗಳನ್ನು ಮಾಡುವುದರ ಮೂಲಕ ಎನ್‍ಇಪಿ-2020 ಹಾಗೂ 4 ವರ್ಷದ ಹೇಗೆ ಮಾರಕವಾದುದು ಮತ್ತು ಇದರ ಹಿಂದಿರುವ ಪಟ್ಟಬದ್ರ ಹಿತಾಸಕ್ತಿಗಳನ್ನು ಜನರ ಮುಂದಿಡಲಾಯಿತು. ಜೊತೆಗೆ ರಾಜ್ಯದಲ್ಲಿ ವಿದ್ಯಾರ್ಥಿ ಸಂಘಟನೆಗಳು, ಇನ್ನಿತರ ಪ್ರಗತಿಪರ ಸಂಘಟನೆಗಳು, ಶಿಕ್ಷಣಪ್ರೇಮಿ ಜನತೆಯು ನಡೆಸಿದ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ಯುಜಿಸಿ ಮಾಜಿ ಅಧ್ಯಕ್ಷರಾದ ಪ್ರೊ. ಸುಖದೇವ್ ಥೋರಟ್‍ರವರ ನೇತೃತ್ವದಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ರಚಿಸಿತು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಸಂಘಟನೆಯಿಂದ ನಡೆಸಿದ್ದ ಸಮೀಕ್ಷೆ ಹಾಗೂ 4 ವರ್ಷದ ಪದವಿಯಿಂದಾಗುತ್ತಿರುವ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಹಾಗೂ ವಾಸ್ತವಿಕ ಅಂಕಿ-ಅಂಶಗಳ ಮೂಲಕ ಹಲವಾರು ವರದಿಗಳನ್ನು ಆಯೋಗಕ್ಕೆ ಸಲ್ಲಿಸಲಾಗಿತ್ತು. ಇತ್ತಿಚೆಗೆ ಪ್ರೊ.ಸುಖದೇವ್ ಥೋರಟ್ ರವರ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ಸರ್ಕಾರಕ್ಕೆ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು. ಈ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರವು ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಶೈಕ್ಷಣಿಕ ಸಂಘಟನೆಗಳು, ಪೋಷಕರ ಅನಿಸಿಕೆಯಂತೆ 4 ವರ್ಷದ ಪದವಿಯನ್ನು ರದ್ದುಗೊಳಿಸಿರುವುದನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ಸ್ವಾಗತಿಸುತ್ತದೆ. ಹಾಗೂ ರಾಜ್ಯ ಸರ್ಕಾರಕ್ಕೆ ಮತ್ತು ಪ್ರೊ. ಸುಖದೇವ್ ಥೋರಟ್ ಅವರ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಮುಂಬರುವ ರಾಜ್ಯ ಶಿಕ್ಷಣ ನೀತಿಯು, ಭಾರತದ ನವೋದಯದ ಚಿಂತಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಆಶಯಗಳಾದ ವೈಜ್ಞಾನಿಕ, ಧರ್ಮನಿರಪೇಕ್ಷ ಮತ್ತು ಜನತಾಂತ್ರಿಕ ಮೌಲ್ಯಗಳಿಗೆ ಬದ್ಧವಾದ ಹಾಗೂ ಸಾರ್ವತ್ರಿಕ ಶಿಕ್ಷಣವನ್ನು ಖಾತ್ರಿಪಡಿಸುವ ಮತ್ತು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಗೊಳಿಸಬೇಕು ಎಂದು ಅವರು ಕೋರಿದ್ದಾರೆ.