ನಾಲ್ಕು ಬಾರಿ ಸಂಚು ರೂಪಿಸಿ ಪತ್ನಿ ಕೊಂದ ಪತಿ ಸೆರೆ

ಬೆಂಗಳೂರು,ಸೆ.೨೩-ಶೀಲ ಶಂಕಿಸಿ ಚಾಕುವಿನಿಂದ ಪತ್ನಿಯ ಕತ್ತು ಸೀಳಿ ಬರ್ಬರ ಕೊಲೆಗೈದು ಪರಾರಿಯಾಗಿದ್ದ ಪತಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನ್ನಪೂರ್ಣೇಶ್ವರಿ ನಗರದ ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸ ಮಾಡುತ್ತಿದ್ದ ಕಾಂತರಾಜ್ ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಕಳೆದ ಸೆ.೨೨ರ ಸಂಜೆ ಪತ್ನಿ ರೂಪಾ(೩೪) ಅವರ ಕುತ್ತಿಗೆ ಸೀಳಿ ಕೊಲೆ ಮಾಡಿ ಮನೆಯ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದ ಕಾಂತರಾಜ್ ನನ್ನು ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದರು.
ವಿಚಾರಣೆಯಲ್ಲಿ ಕಾಂತರಾಜ್ ಪತ್ನಿಯನ್ನು ಕೊಲೆ ಮಾಡಲು ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಲು ಸಂಚು ರೂಪಿಸಿರುವುದು ಪತ್ತೆಯಾಗಿದೆ. ಪತ್ನಿ ರೂಪಾ ಅಪರಿಚಿತ ವ್ಯಕ್ತಿಯೊಬ್ಬನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಹೊಂದಿದ್ದ ಈ ವಿಚಾರವಾಗಿ ತೀವ್ರ ಖಿನ್ನೆತೆಗೆ ಒಳಾಗಾಗಿ ಆಕೆಯನ್ನು ಕೊಲೆ ಮಾಡಲು ಸಿನಿಮೀಯ ರೀತಿಯ ಸಂಚು ರೂಪಿಸಿದ್ದ.
ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ನೋಡಿ ಅದೇ ಶೈಲಿಯಲ್ಲಿ ಕೊಲೆ ಮಾಡಲು ಪ್ರವಾಸಕ್ಕೆ ಪತ್ನಿಯನ್ನು ಕರಾವಳಿ ಭಾಗಕ್ಕೆ ಕರೆದುಕೊಂಡು ಹೋಗಿದ್ದ. ಪ್ರಕೃತಿ ಸೌಂದರ್ಯ ತೋರಿಸುವ ನೆಪದಲ್ಲಿ ಎತ್ತರಕ್ಕೆ ಕರೆದುಕೊಂಡು ಹೋಗಿ ನಂತರ ಕೆಳಗೆ ತಳ್ಳಿ ಕೊಲೆ ಮಾಡಲು ಮೂರು ದಿನಗಳ ಕಾಲ ಸಂಚು ಮಾಡಿದ್ದನಾದರೂ ಅದು ಸಾಧ್ಯವಾಗಿರಲಿಲ್ಲ.
ಬಳಿಕ ‘ಯುಗಪುರುಷ’ ಸಿನಿಮಾದಲ್ಲಿ ಕಾರಿನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡುವ ದೃಶ್ಯದಂತೆ ಪತ್ನಿಯನ್ನು ಕಾರಿನಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಸಂಚು ಫಲಿಸದೇ ಪತ್ನಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಳು.
ಕೊನೆಗೆ ಕೋಪದಲ್ಲಿ ಕಾಂತರಾಜ್ ಮನೆಗೆ ಸೆ.೨೨ ರಂದು ಸಂಜೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಟ್ಯೂಷನ್‌ಗೆ ಹೋಗಿದ್ದ ಮಗ ಮನೆಗೆ ವಾಪಸ್ಸಾದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಅನ್ನಪೂಣೇಶ್ವರಿನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ತಲೆಮರೆಸಿಕೊಂಡಿದ್ದ ಕಾಂತರಾಜ್ ನನ್ನು ಬಂಧಿಸಿದ್ದಾರೆ ಎಂದರು.