ನಾಲ್ಕು ಪೀಠಗಳ ಅಭಿವೃದ್ಧಿಗೆ ಆದ್ಯತೆ

ದೇವದುರ್ಗ.ಜ.೧೩-ಕುರುಬ ಸಮುದಾಯದ ನಾಲ್ಕು ವಿಭಾಗೀಯ ಕಾಗಿನೆಲೆ ಮಠಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಚರ್ಚಿಸಿ ವಿಶೇಷ ಅನುದಾನ ನೀಡುವ ಪ್ರಯತ್ನ ಮಾಡಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬಸವರಾಜ್ ಭೈರತಿ ಹೇಳಿದರು.
ತಾಲೂಕಿನಲ್ಲಿ ತಿಂತಿಣಿ ಬ್ರಿಡ್ಜ್ ನ ಕಾಗಿನೆಲೆ ಕನಕ ಗುರು ಪೀಠದಲ್ಲಿ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಟಗರು ಜೋಗಿಗಳು, ಹೆಳವರು, ಕಾಡುಸಿದ್ದರ ಸಮಾವೇಶ ಉದ್ಘಾಟಿಸಿ ಬುಧವಾರ ಮಾತನಾಡಿದರು. ಕಾಗಿನೆಲೆ ಕನಕಗುರುಪೀಠ ಸಂಸ್ಥಾನ, ಕೇವಲ ಕುರುಬರಿಗೆ ಮಾತ್ರ ಸೀಮಿತವಲ್ಲ. ತುಳಿತಕ್ಕೊಳಗಾದ ಎಲ್ಲಾ ಸಮುದಾಯಗಳು ಶೇರು ಎಲ್ಲಾ ಸಮುದಾಯಗಳ ಮಠ. ಮಠಗಳು ಅಭಿವೃದ್ಧಿಯಾದರೆ ಜಾತಿಗಳ ಅಭಿವೃದ್ಧಿ ಸಾಧ್ಯ. ಸರ್ಕಾರ ಕುರುಬ ಸಮುದಾಯದ ಎಲ್ಲಾ ನಾಲ್ಕು ವಿಭಾಗೀಯ ಮಠಗಳ ಅಭಿವೃದ್ಧಿಗೆ ಶ್ರಮಿಸಲಿ. ನಾನು ಅಧಿಕಾರದಲ್ಲಿದ್ದರೂ, ಇಲ್ಲದಿದ್ದರೂ ಮಠಗಳ ಅಭಿವೃದ್ಧಿಗೆ ಸಹಕಾರ ನೀಡುವೆ.
ಕನಕ ಗುರು ಪೀಠ ಹಾಲುಮತ ಸಮುದಾಯ ಮಾತ್ರವಲ್ಲ ಹೆಳವರು, ಕಾಡುಸಿದ್ದರು, ಟಗರು ಜೋಗಿಗಳ ಸಮಾವೇಶ ಮಾಡಿ, ಅವರಿಗೆ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕಾರ್ಯ ವಾಗಿದೆ. ಶ್ರೀಗಳು ನಮಗೆ ಯಾವುದೇ ಸೂಚನೆ ನೀಡಿದರೂ ಚಾಚು ತಪ್ಪದೆ ಪಾಲಿಸುತ್ತೆನೆ. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳು, ಇವರ ಸಮಾವೇಶದ ಮೂಲಕ ಸಂಘಟಿತರಾಗಿ ಬಲಿಷ್ಠರಾಗಬೇಕು. ಆಗ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ ಎಂದರು.
ಪೀಠಾಧಿಪತಿ ಸಿದ್ದರಾಮಾನಂದ ಸ್ವಾಮೀಜಿ ಮಾತನಾಡಿ, ಹೆಳವರು, ಟಗರು ಜೋಗಿಗಳು, ಸುಡುಗಾಡು ಸಿದ್ಧರು ಸಮಾಜದಲ್ಲಿ ತುಳಿತಕ್ಕೆ ಒಳಗಾಗಿದ್ದಾರೆ. ಅವರ ಸಂಸ್ಕೃತಿ ಉಳಿಸಿ ಬೆಳೆಸಲು ಈ ಸಮಾವೇಶ ಆಯೋಜಿಸಲಾಗಿದೆ ಎಂದರು.
ಮಾಜಿ ಸಚಿವ ಎಚ್‌ಎಂ ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಕೆ. ವಿರೂಪಾಕ್ಷಪ್ಪ, ಶಿವ ಸಿದ್ದೇಶ್ವರ ಸ್ವಾಮೀಜಿ, ಬೀರಪ್ಪ ಸ್ವಾಮೀಜಿ, ಅಯ್ಯಾಳೇಶ್ವರ ಸ್ವಾಮೀಜಿ, ವರ ದಾನೇಶ್ವರ ಸ್ವಾಮಿ ಇತರರು ಇದ್ದರು.