ನಾಲ್ಕು ದಿನಗಳ ಕಠಿಣ ಲಾಕ್‍ಡೌನ್ ಅಂತ್ಯ: ಕಲಬುರಗಿ ಸಂಪೂರ್ಣ ಸ್ಥಬ್ದ

ಕಲಬುರಗಿ:ಮೇ.30: ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ನಾಲ್ಕು ದಿನಗಳ ಕಾಲ ಕಠಿಣ ಲಾಕ್‍ಡೌನ್ ಜಾರಿಗೆ ತಂದಿದ್ದು, ಭಾನುವಾರ ಕೊನೆಯ ದಿನದಂದು ನಗರದಲ್ಲಿ ಅನಗತ್ಯ ಸವಾರರ ಸಂಖ್ಯೆಯು ಅತ್ಯಂತ ವಿರಳವಾಗಿತ್ತು. ಟಾಂಗಾ, ತ್ರಿಚಕ್ರವಾಹನಗಳ ಸಂಚಾರ ಬೆರಳೆಣಿಕೆಯಲ್ಲಿಷ್ಟಿತ್ತು. ಎತ್ತಿನ ಬಂಡೆಯೊಂದು ಚಲಿಸಿದ್ದು ವಿಶೇಷವಾಗಿತ್ತು. ಲಾಕ್‍ಡೌನ್ ಮಧ್ಯೆಯೂ ಅಗತ್ಯ ಸೇವೆಗಳಿಗೆ ಸಂಚರಿಸುವವರನ್ನೂ ಸಹ ಹಲವಾರು ಸಂದರ್ಭದಲ್ಲಿ ಪರಿಶೀಲಿಸಿ ಬಿಡಲಾಯಿತು.
ಔಷಧಿ ಅಂಗಡಿಗಳು, ಆಸ್ಪತ್ರೆಗಳು, ಹಾಲಿನ ಅಂಗಡಿಗಳು ಹಾಗೂ ಪೆಟ್ರೋಲ್ ಪಂಪ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಉಳಿದಂತೆ ಎಲ್ಲ ವ್ಯಾಪಾರ, ವಹಿವಾಟುಗಳು ಸ್ಥಗಿತಗೊಂಡಿದ್ದವು. ನಗರದ ಸೂಪರ್ ಮಾರ್ಕೆಟ್, ಗಂಜ್ ಪ್ರದೇಶ, ಜಗತ್ ವೃತ್ತ, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ರೈಲು ನಿಲ್ದಾಣ, ಬಸ್ ನಿಲ್ದಾಣ, ರಾಮ ಮಂದಿರ ವೃತ್ತ, ಹುಮ್ನಾಬಾದ್ ಬೇಸ್, ಆಳಂದ್ ನಾಕಾ, ಹೈಕೋರ್ಟ್ ಪ್ರದೇಶ, ಶಹಾಬಜಾರ್ ನಾಕಾ, ಲಾಲ್‍ಗೇರಿ ಕ್ರಾಸ್ ಸೇರಿದಂತೆ ಜನನಿಬಿಡ ಪ್ರದೇಶಗಳು ಜನಗಳು ಹಾಗೂ ವಾಹನಗಳ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು.
ಪ್ರಮುಖ ವೃತ್ತಗಳಲ್ಲಿ ಪೋಲಿಸರ ಸರ್ಪಗಾವಲು ಇತ್ತು ಹಾಗೂ ಅನಗತ್ಯ ವಾಹನಗಳ ಸಂಚಾರ ತಡೆಯಲು ಬ್ಯಾರಿಕೇಡ್‍ಗಳನ್ನು ಸಹ ಹಾಕಲಾಗಿತ್ತು. ಇದರಿಂದಾಗಿ ಬಹುತೇಕ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡು ರಸ್ತೆಗಳು ಬಿಕೋ ಎನ್ನುತ್ತಿದ್ದವು. ಅನಗತ್ಯ ಸವಾರರು ಕಂಡಲ್ಲಿ ಅಂಥವರ ವಾಹನಗಳನ್ನು ಜಪ್ತಿ ಮಾಡಲಾಯಿತು. ಮಾಸ್ಕ್ ಇಲ್ಲದೇ ಓಡಾಡುವವರಿಗೆ ದಂಡ ಹಾಕಲಾಯಿತು.
ರೈಲು ಸಂಚಾರ ಎಂದಿನಂತೆ ಇದ್ದುದರಿಂದ ರೈಲಿನಲ್ಲಿ ನಗರಕ್ಕೆ ಬಂದಿಳಿದ ಪ್ರಯಾಣಿಕರಿಗೆ ಸಮರ್ಪಕ ವಾಹನಗಳು ಸಕಾಲಕ್ಕೆ ದೊರಕದೇ ಇದ್ದುದರಿಂದ ಕಾಲ್ನಡಗಿಯಲ್ಲಿಯೇ ತಮ್ಮ ಕುಟುಂಬ ಸಮೇತರಾಗಿ ಗಂಟು ಮೂಟೆಗಳಿಂದ ತೆರಳುತ್ತಿರುವ ದೃಶ್ಯಗಳು ಕಂಡುಬಂದವು. ಕೆಲ ಗ್ರಾಮೀಣ ಪ್ರದೇಶದ ರೈಲು ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ದೊರಕದೇ ಸಂಕಷ್ಟಕ್ಕೆ ಒಳಗಾಗಿ ರಸ್ತೆ ಬದಿಯಲ್ಲಿ ಕಾಲಕಳೆಯುವಂತಾಯಿತು. ಕೆಲವರು ಬಸ್ ನಿಲ್ದಾಣಗಳ ತಂಗುದಾಣಗಳೇ ವಿಶ್ರಾಂತಿ ಧಾಮಗಳನ್ನಾಗಿ ಮಾಡಿಕೊಂಡರು.
ಮಹಾಮಾರಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತವು ಕಳೆದ ವಾರ ಗುರುವಾರ, ಶುಕ್ರವಾರ ಹಾಗೂ ಶನಿವಾರ ಒಟ್ಟು ಮೂರು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಜಾರಿಗೆ ತಂದಿತ್ತು. ಆ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಂಡಿದ್ದರಿಂದ ಈ ಬಾರಿ ಕಠಿಣ ಲಾಕ್‍ಡೌನ್‍ನನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಲಾಯಿತು. ಹೀಗಾಗಿ ಈ ಬಾರಿಯೂ ಸಹ ಕೋವಿಡ್ ಸಾವು ಹಾಗೂ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿತಕಂಡಿದ್ದು, ಕೋವಿಡ್ ನಿಯಂತ್ರಣಕ್ಕೆ ಬರುವ ಎಲ್ಲ ರೀತಿಯ ವಾತಾವರಣ ನಿರ್ಮಾಣವಾಗಿದೆ.