ನಾಲ್ಕು ದಿನಗಳಲ್ಲಿ ಲಾಕ್‍ಡೌನ್ ಅಂತ್ಯ:ಕಲಬುರಗಿಯಲ್ಲಿ ಹೆಚ್ಚುತ್ತಿರುವ ಖಾಸಗಿ ವಾಹನಗಳ ಸಂಚಾರ

ಕಲಬುರಗಿ,ಜೂ.9:ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕು ನಿಯಂತ್ರಣವಾಗುತ್ತಿದ್ದು, ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಜಾರಿಗೆ ತಂದ ಎರಡನೇ ಹಂತದ ಲಾಕ್‍ಡೌನ್ ಅವಧಿ ಪೂರ್ಣಗೊಳ್ಳಲು ಇನ್ನು ನಾಲ್ಕೈದು ದಿನಗಳು ಬಾಕಿ ಉಳಿದಿವೆ. ಹಂತ, ಹಂತವಾಗಿ ಲಾಕ್‍ಡೌನ್ ತೆರವುಗೊಳಿಸುವ ಕುರಿತು ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಲಾಕ್‍ಡೌನ್ ವಿಸ್ತರಿಸದೇ ತೆರವುಗೊಳಿಸಲಾಗುತ್ತಿದೆ ಎಂಬ ವಿಶ್ವಾಸವು ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ.
ಲಾಕ್‍ಡೌನ್‍ನನ್ನು ರೈತರಿಗಾಗಿ ಹಾಗೂ ಗ್ಯಾರೇಜ್‍ನವರಿಗಾಗಿ ಸಡಿಲಿಸಲಾಗಿದೆ. ಮುಂಗಾರು ಬಿತ್ತನೆ ಆರಂಭವಾಗಿದ್ದರಿಂದ ಕೃಷಿ ಚಟುವಟಿಕೆಗಳಿಗಾಗಿ ರೈತರು ಖರೀದಿಸಲು ಕೃಷಿ ಪರಿಕರ ಅಂಗಡಿಗಳನ್ನು ಲಾಕ್‍ಡೌನ್ ಅವಧಿಯಲ್ಲಿ ಬೆಳಿಗ್ಗೆಯಿಂದ ಅಪರಾಹ್ನ 12 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಈ ಅವಧಿಯಲ್ಲಿ ರೈತರು ತಮ್ಮ ವಾಹನಗಳೊಂದಿಗೆ ಮಾರುಕಟ್ಟೆಗೆ ತೆರಳಿ ತಮಗೆ ಬೇಕಾದ ಬೀಜ, ರಸಗೊಬ್ಬರ ಹಾಗೂ ಪರಿಕರಗಳನ್ನು ಖರೀದಿಸುತ್ತಿದ್ದಾರೆ.
ಇನ್ನು ಖಾಸಗಿ ವಾಹನಗಳ ಸಣ್ಣಪುಟ್ಟ ದುರಸ್ತಿಗಾಗಿ ಗ್ಯಾರೇಜ್‍ಗಳನ್ನೂ ಸಹ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ವಾಹನ ಸವಾರರು ತಮ್ಮ ಕೆಟ್ಟ ವಾಹನಗಳ ದುರಸ್ತಿಗಾಗಿ ಗ್ಯಾರೇಜ್‍ಗೆ ಹೋಗುತ್ತಿರುವ ಹಾಗೂ ದುರಸ್ತಿ ಮಾಡುವ ಕೆಲಸಗಳೂ ಸಹ ಈಗಾಗಲೇ ಆರಂಭವಾಗಿವೆ.
ಇನ್ನು ಲಸಿಕೆ ಕಾರ್ಯವೂ ಸಹ ನಿರಂತರವಾಗಿ ಮುಂದುವರೆದಿದ್ದು, ದಾಖಲೆಗಳನ್ನು ತೋರಿಸಿ ಲಸಿಕೆ ಹಾಕಿಸಿಕೊಳ್ಳುವವರು ವಾಹನಗಳ ಮೂಲಕ ಸಂಚರಿಸುತ್ತಿದ್ದಾರೆ. ಹೀಗಾಗಿ ಖಾಸಗಿ ದ್ವಿಚಕ್ರವಾಹನಗಳು, ತ್ರಿಚಕ್ರವಾಹನಗಳು ಹಾಗೂ ಕಾರು ಮುಂತಾದ ವಾಹನಗಳ ಸಂಚಾರವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಲಾಕ್‍ಡೌನ್ ಎಂದಾಕ್ಷಣ ಇಡೀ ರಸ್ತೆಗಳೆಲ್ಲ ಜನಸಂಚಾರ ಹಾಗೂ ವಾಹನಗಳ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದ್ದವು. ಈಗ ಕೆಲ ವಿನಾಯಿತಿಗಳಿಂದ ಹಲವಾರು ಅಂಗಡಿಗಳು ತೆರೆದಿದ್ದು, ಕೆಲ ಪ್ರದೇಶದಲ್ಲಿ ಜನಸಂಚಾರ ಕಂಡುಬರುತ್ತಿದೆ. ಹೊಟೇಲ್‍ಗಳಲ್ಲಿ ಪಾರ್ಸೆಲ್ ತೆಗೆದುಕೊಳ್ಳಲು ಅವಕಾಶ ಇದ್ದುದರಿಂದ ಹೊಟೇಲ್‍ಗಳ ಮುಂದೆ ಪಾರ್ಸೆಲ್‍ಗಾಗಿ ಕಾಯುತ್ತಿರುವಂತಹ ದೃಶ್ಯಗಳು ಸಹ ಕಂಡುಬರುತ್ತಿವೆ.
ಲಾಕ್‍ಡೌನ್ ಜಾರಿಯಲ್ಲಿದ್ದರೂ ಸಹ ಮೊದಲಿನಂತೆ ಕಟ್ಟುನಿಟ್ಟಿನ ಕ್ರಮಗಳು ಸಹ ಈಗ ಜಾರಿಯಾಗುತ್ತಿಲ್ಲ. ಹೀಗಾಗಿ ವಿವಿಧ ಕಿರಾಣಿ ಅಂಗಡಿಗಳೂ ಸೇರಿದಂತೆ ವಿವಿಧ ಅಂಗಡಿ, ಮುಂಗಟ್ಟುಗಳನ್ನು ಕದ್ದು ಮುಚ್ಚಿ ತೆರೆದು ವ್ಯಾಪಾರ, ವಹಿವಾಟು ಆರಂಭಿಸಿರುವುದು ಹಲವೆಡೆ ಕಂಡುಬಂತು