ನಾಲ್ಕು ದಿನಗಳಲ್ಲಿ ಬಂಡಾಯ ಶಮನ: ಬಿ.ವೈ.ವಿಜಯೇಂದ್ರ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.28:- ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಶಿವಮೊಗ್ಗ ಸೇರಿ ಎಲ್ಲಾ ಕಡೆಯ ಬಂಡಾಯ ಶಮನವಾಗುತ್ತದೆ. ಬಿ.ಎಸ್.ಯಡಿಯೂರಪ್ಪನವರು ಎಲ್ಲೆಡೆ ಹೋಗಿ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಬಿ.ವೈ.ವಿಜಯೇಂದ್ರ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದರು. ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಿದ್ದು, ಯಶಸ್ವಿಯಾಗಲಿ ಎಂದು ಬೇಡಿಕೊಂಡರು. ರಾಜ್ಯದಲ್ಲಿ ಬರಗಾಲ ಇದೆ. ಶೀಘ್ರವೇ ದೇವಿಯ ಅನುಗ್ರಹದಿಂದ ಒಳ್ಳೆಯ ಮಳೆಯಾಗಲಿ ಎಂದು ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿರುವುದಾಗಿ ಅವರು ಹೇಳಿದರು.
ಕಾಂಗ್ರೆಸ್‍ಗೆ ಸೋಲಿನ ಭಯ: ಲೋಕಾಸಭಾ ಚುನಾವಣೆಗೆ ಕರ್ನಾಟಕ ಸರ್ಕಾರದ 18 ಸಚಿವರನ್ನು ಕಣಕ್ಕಿಳಿಸಲು ಸಿಎಂ, ಡಿಸಿಎಂ ಪ್ಲಾನ್?? ಮಾಡಿದ್ದರು. ಆದರೆ ಮೋದಿಯವರ ಅಲೆಗೆ ಹೆದರಿ ಸಚಿವರು ಸ್ಪರ್ಧೆ ಮಾಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಯಾರೂ ಸ್ಪರ್ಧೆ ಮಾಡುತ್ತಿಲ್ಲ. ಎಲ್ಲಾ ಸಚಿವರಿಗೂ ಸೋಲಿನ ಭಯವಾಗಿದೆ. ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಕಳೆದುಕೊಂಡ ಏಕೈಕ ಸರ್ಕಾರ ಸಿದ್ದರಾಮಯ್ಯ ಸರ್ಕಾರ. ಇವರು ಬಡವರ ಪರವಾಗಿ, ಶೋಷಿತರ ಪರವಾಗಿ, ರೈತ ಪರವಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಜನ ಬೇಸರ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಜೆಡಿಎಸ್-ಬಿಜೆಪಿ ಒಂದಾಗಿ ಇರುವುದು ನಮಗೆ ಪ್ಲಸ್ ಆಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಯಾವುದೇ ಪ್ಲಸ್, ಮೈನಸ್ ಇಲ್ಲ. ಜನ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಸೋಲಿನ ಭಯದಿಂದ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದರು.
ಶಾಸಕ ಶ್ರೀವತ್ಸ, ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಬಾಲರಾಜ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್‍ಕುಮಾರ್‍ಗೌಡ, ಕೃಷ್ಣರಾಜ ಕ್ಷೇತ್ರದ ಯುವ ಮೋರ್ಚಾ ಉಪಾಧ್ಯಕ್ಷ ಮನುಶೈವ(ಅಪ್ಪಿ) ಇನ್ನಿತರರು ಉಪಸ್ಥಿತರಿದ್ದರು.