ನಾಲ್ಕು ಎಕರೆ ಭತ್ತದ ಬೆಳೆ ಸಂಪೂರ್ಣ ಬೆಂಕಿ

ಕೆ.ಆರ್.ಪೇಟೆ.ಜ.04: ಬೆಂಕಿ ಆಕಸ್ಮಿಕಕ್ಕೆ ಸಿಲುಕಿ ಒಕ್ಕಣೆಗಾಗಿ ಮೆದೆ ಹಾಕಿದ್ದ ರೈತರ ನಾಲ್ಕು ಎಕರೆ ಭತ್ತದ ಬೆಳೆ ಸಂಪೂರ್ಣ ಸುಟ್ಟುಹೋಗಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲಂಬಾಡಿ ಕಾವಲು ಗ್ರಾಮದಲ್ಲಿಂದು ಘಟಿಸಿದೆ.
ಆಲಂಬಾಡಿ ಕಾವಲು ಗ್ರಾಮದ ರೈತ ಕೃಷ್ಣೇಗೌಡ ಮತ್ತು ರತ್ನಮ್ಮ ಎನ್ನುವವರು ಸಾವಿರಾರು ರೂ ವ್ಯಯಿಸಿ ತಮ್ಮ ಜಮೀನಿನಲ್ಲಿ ಭತ್ತ ಬೆಳೆದಿದ್ದರು. ಬೆಳೆದ ಭತ್ತದ ಬೆಳೆಯನ್ನು ಕಟಾವು ಮಾಡಿ ಒಕ್ಕಣೆಗಾಗಿ ಕಣದಲ್ಲಿ ಮೆದೆ ಹಾಕಿದ್ದರು.ಮಂಗಳವಾರ ಮಧ್ಯಾಹ್ನದ ವೇಳೆಯಲ್ಲಿ ಕಣದಲ್ಲಿದ್ದ ಭತ್ತದ ಮೆದೆಗೆ ಬೆಂಕಿ ಬಿದ್ದಿದೆ. ಅಗ್ನಿ ಆಕಸ್ಮಿಕಕ್ಕೆ ಕಾರಣ ತಿಳಿದು ಬಂದಿಲ್ಲ. ದಾರಿಹೋಕರು ಬೀಡಿ ಸೇದಿ ಎಸೆದ ಪರಿಣಾಮ ಬೆಂಕಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಅಗ್ನಿ ಆಕಸ್ಮಿಕದಿಂದ ರೈತ ಕೃಷ್ಣೇಗೌಡ ಮತ್ತು ರತ್ನಮ್ಮ ಅವರ ಲಕ್ಷಾಂತರ ರೂ ಮೌಲ್ಯದ ಭತ್ತ ಹುಲ್ಲಿನ ಸಮೇತ ಸುಟ್ಟು ಕರಕಲಾಗಿದೆ. ಸ್ಥಳೀಯ ಗ್ರಾಮಸ್ಥರು ಬಿಂದಿಗೆಗಳನ್ನು ಹಿಡಿದು ನೀರು ಹಾಕಿ ಬೆಂಕಿ ನಂದಿಸುವ ಕೆಲಸ ಮಾಡಿದರೂ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ. ಬೆಂಕಿಬಿದ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿ ಶಾಮಕ ಪಡೆಯ ಅಧಿಕಾರಿ ಶಿವಣ್ಣ ನೇತೃತ್ವದಲ್ಲಿ ಅಗ್ನಿ ಶಾಮಕ ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದರು. ಅಗ್ನಿ ಶಾಮಕ ಪಡೆ ಬರುವಷ್ಟರ ವೇಳೆಗೆ ರೈತರಿಬ್ಬರ ಭತ್ತ ಹುಲ್ಲಿನ ಸಮೇತ ಬೆಂಕಿಗಾಹುತಿಯಾಗಿತ್ತು.
ಕೃಷ್ಣೇಗೌಡ ಮತ್ತು ರತ್ನಮ್ಮ ಅವರು ಒಕ್ಕಣೆ ಮಾಡಿದ್ದ ಸ್ಥಳದಲ್ಲಿಯೇ ಇನ್ನೂ ಐದಾರು ಜನರೈತರು ಕಟಾವು ಮಾಡಿದ್ದ ಭತ್ತವನ್ನು ಭತ್ತ ಬಡಿಯುವ ಯಂತ್ರದ ಸಹಾಯದಿಂದ ಒಕ್ಕಣೆ ಮಾಡಲು ಒಂದೇ ಕಣದಲ್ಲಿ ಮೆದೆ ಹಾಕಿದ್ದರು. ಅಗ್ನಿ ಶಾಮಕ ಪಡೆ ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ ಪರಿಣಾಮ ಇತರ ರೈತರಿಗೆ ಸೇರಿದ ಭತ್ತದ ಬೆಳೆಯನ್ನು ಸಂರಕ್ಷಿಸಲಾಗಿದ್ದು ಅಗ್ನಿ ಶಾಮಕ ಪಡೆಯ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ಸಲ್ಲಿಸಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಶಿವಮ್ಮ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರಲ್ಲದೆ ಅಗತ್ಯ ವರದಿ ನೀಡಿ ತಾಲೂಕು ಆಡಳಿತದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.