ನಾಲ್ಕರ ಮಗುವಿನ ಮೇಲೆರಗಿದ ಕಾಮುಕ: ಧರ್ಮಸ್ಥಳ ಪೊಲೀಸ್ ವಶಕ್ಕೆ

ಮಂಗಳೂರು: ನಾಲ್ಕರ ಹರೆಯದ ಏನೂ ಅರಿಯದ ಮಗುವನ್ನು ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಿದ ಕಾಮುಕನನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಕ್ಕಿಂಜೆ ನಿವಾಸಿ ವಿಗ್ನೇಶ್ ಭಂಡಾರಿ(೨೯) ಪ್ರಕರಣದ ಆರೋಪಿ.

ಘಟನೆಯ ವಿವರ:

ಆರೋಪಿ ಮನೆ ಪಕ್ಕದ ಮಗುವಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದು ಈ ಹಿಂದೊಮ್ಮೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ವೇಳೆ ರಾಜಿ ಪಂಚಾತಿಕೆ ನಡೆದು ಪ್ರಕರಣ ಮುಚ್ಚಿಹಾಕಲಾಗಿತ್ತು ಎಂದು ತಿಳಿದುಬಂದಿದೆ.

ನಿನ್ನೆ ಮತ್ತೆ ಆರೋಪಿ ನಾಲ್ಕರ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದು ಮಗು ಮನೆಯಲ್ಲಿ ವಿಚಾರಿಸಿದಾಗ ವಿಗ್ನೇಶ್ ಹೆಸರನ್ನು ಹೇಳಿತ್ತೆನ್ನಲಾಗಿದೆ. ಅದರಂತೆ ಪೋಷಕರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿ ಸಂತ್ರಸ್ತ ಮಗುವಿಗೆ ಈ ಹಿಂದೆಯೂ ಲೈಂಗಿಕ ಕಿರುಕುಳ ನೀಡಿದ್ದು ಮತ್ತೆ ಕಾಮತೃಷೆ ತೀರಿಸಲು ಬಳಸಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಮಗುವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.