ನಾಲ್ಕನೇ ದಿನ ಯಶಸ್ವಿ : ಕುಷ್ಟಿಗಿಯಲ್ಲೂ ಅಭಿಮಾನಿಗಳ ದಾಸೋಹ

ಕೆಎಸ್‌ಎನ್ ಅನ್ನದಾಸೋಹ ಮಾದರಿ – ರಾಜ್ಯದಲ್ಲಿ ಚರ್ಚೆ
ರಾಯಚೂರು.ಜೂ.೦೪- ಕೋವಿಡ್ ಲಾಕ್ ಡೌನ್‌ನ ಹಿನ್ನೆಲೆಯಲ್ಲಿ ಜನರಿಗೆ ಉಚಿತ ಅನ್ನದಾಸೋಹದಲ್ಲಿ ರಾಜ್ಯಕ್ಕೆ ಮಾದರಿಯಾದ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರ ಅನ್ನದಾಸೋಹ ಕೇಂದ್ರಕ್ಕೆ ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಭೇಟಿ ನೀಡಿ, ಮುಕ್ತಕಂಠದಿಂದ ಶ್ಲಾಘೀಸಿದರು.
ಅನ್ನದಾಸೋಹ ಕೇಂದ್ರದಲ್ಲಿ ಸಾರ್ವಜನಿಕರಿಗೆ ವಿತರಿಸುವ ಊಟವನ್ನು ಸವಿದು, ಗುಣಮಟ್ಟದ ಊಟದ ಬಗ್ಗೆ ಕೆ.ಶಿವನಗೌಡ ನಾಯಕ ಅವರಿಗೆ ಉತ್ತಮ ಕಾರ್ಯವೆಂದು ಹೇಳಿದರು. ಪ್ರತಿನಿತ್ಯ ೭ ಘಂಟೆಯಿಂದ ಅನ್ನದಾಸೋಹ ಪ್ರಕ್ರಿಯೆ ಆರಂಭಿಸಲಾಗುತ್ತದೆ. ನಿನ್ನೆಯಿಂದ ದೇವದುರ್ಗ ಪಟ್ಟಣದ ಎಲ್ಲಾ ವಾರ್ಡ್ ಸೇರಿದಂತೆ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೊಟ್ಟೆ ಸಹಿತ ಈ ಊಟ ಈಗ ದೇವದುರ್ಗದಲ್ಲಿ ಮನೆ ಮನೆಯ ಮಾತಾಗಿದೆ.
ದೇವದುರ್ಗಕ್ಕೆ ಮಾತ್ರ ಸೀಮಿತವಾಗಿರದೇ, ಕೆಎಸ್‌ಎನ್ ಅಭಿಮಾನಿ ಬಳಗ ಜಿಲ್ಲೆಯಲ್ಲಿ ಮಾತ್ರವಲ್ಲ, ಹೊರ ಜಿಲ್ಲೆಗಳಲ್ಲೂ ಈ ಅನ್ನದಾಸೋಹದ ವ್ಯವಸ್ಥೆ ಭರ್ಜರಿಯಾಗಿ ನಡೆದಿದೆ. ಕುಷ್ಟಗಿ ತಾಲೂಕಿನ ಕೆಎಸ್‌ಎನ್ ಅಭಿಮನಿ ಬಳಗ ಕೆ.ಶಿವನಗೌಡ ನಾಯಕ ಅವರ ಬ್ಯಾನರ್‌ಗಳ ಮುಂದೆ ಉಚಿತ ಊಟದ ವ್ಯವಸ್ಥೆ ನಿರ್ವಹಿಸುತ್ತಿದ್ದಾರೆ.
ಮಠ, ಮಾನ್ಯಗಳ ಮಾದರಿಯಲ್ಲಿ ಕೆ.ಶಿವನಗೌಡ ನಾಯಕ ಅವರ ಅಭಿಮಾನಿ ಬಳಗ ಸ್ವಯಂ ಸ್ಪೂರ್ತಿಯಿಂದ ಜನರ ಸೇವೆಯಲ್ಲಿ ತೊಡಗಿರುವುದು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಅವರ ರಾಜಕೀಯ ಬೆಂಬಲಕ್ಕೆ ನಿದರ್ಶನವಾಗಿದೆ. ದೇವದುರ್ಗ ತಾಲೂಕಿನಲ್ಲಿ ಮೇ.೩೧ ರಂದು ಆರಂಭಗೊಂಡ ಈ ಅನ್ನದಾಸೋಹ ಇಂದಿಗೆ ನಾಲ್ಕು ದಿನಗಳು ಕಳೆದಿವೆ. ದಿನೇ ದಿನೆ ಬೇಡಿಕೆ ಹೆಚ್ಚುತ್ತಿದ್ದರೂ ಕುಗ್ಗದೇ, ಕೆ.ಶಿವನಗೌಡ ನಾಯಕ ಮತ್ತು ಅವರ ಬೆಂಬಲಿಗರು ಬೇಡಿಕೆಗನುಗುಣವಾಗಿ ಊಟ, ಮೊಟ್ಟೆ ಹಾಗೂ ನೀರು ಪೂರೈಸುವಲ್ಲಿ ತೊಡಗಿದ್ದಾರೆ.
ಅತ್ಯಂತ ಸಾಹಸಮಯ ಕಾರ್ಯಕ್ರಮಕ್ಕೆ ಅವರು ಮುಂದಾಗಿದ್ದಾರೆ. ಪ್ರತಿನಿತ್ಯ ಲಕ್ಷಾಂತರ ರೂ. ವೆಚ್ಚದ ಈ ದಾಸೋಹ ಈಗ ರಾಜ್ಯದಲ್ಲಿಯೇ ಚರ್ಚೆಯ ವಿಷಯವಾಗಿದೆ. ಈ ರೀತಿಯ ಅನ್ನದಾಸೋಹವನ್ನು ಜಿಲ್ಲೆಯ ಇತಿಹಾಸದಲ್ಲಿ ಮತ್ತು ರಾಜ್ಯದಲ್ಲಿಯೇ ಯಾರು ಕೈಗೊಂಡಿದ್ದಾರೆಂದು ಕೇಳುವಂತಹ ವಾಟ್ಸಾಪ್ ಸಂದೇಶಗಳು ವೈರಲ್ ಆಗಿ ಮಾರ್ಪಟ್ಟಿವೆ. ಈ ಅನ್ನದಾಸೋಹ ಕಾರ್ಯಕ್ರಮದ ಮೂಲಕ ಕೆ.ಶಿವನಗೌಡ ನಾಯಕ ಅವರು ಈಗ ರಾಜ್ಯದಲ್ಲಿಯೇ ಸುದ್ದಿಯಾಗಿದ್ದಾರೆ.
ಇವರ ಈ ಅನ್ನದಾಸೋಹ ಉಳಿದ ಶಾಸಕರಿಗೆ ಬಿಸಿ ತುಪ್ಪದಂತಾಗಿದೆ. ಕೊರೊನಾ ಲಾಕ್ ಡೌನ್ ಮತ್ತೇ ೧೪ ದಿನ ವಿಸ್ತರಿಸಿದ್ದರಿಂದ ಇತರೆ ಶಾಸಕರು ಈ ರೀತಿಯ ಅನ್ನದಾಸೋಹಕ್ಕೆ ಏಕೆ ಮುಂದಾಗುತ್ತಿಲ್ಲ ಎನ್ನುವ ಪ್ರಶ್ನೆಗಳು ಜನರಿಂದ ವಾಟ್ಸಾಪ್ ಸಂದೇಶಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಒಟ್ಟಾರೆಯಾಗಿ ಕೆ.ಶಿವನಗೌಡ ನಾಯಕ ಅವರ ಈ ದಾಸೋಹ ಕಾರ್ಯಕ್ರಮ ದೇವದುರ್ಗದಲ್ಲಿ ಮಾತ್ರವಲ್ಲ, ಉಳಿದೆಡೆಯಲ್ಲೂ ಸಂಚಲನ ಮೂಡಿಸಿದೆ.