ನಾಲ್ಕನೇ ದಿನವೂ ಮಕ್ಕಳ ಹಾಜರಾತಿ ಹೆಚ್ಚಳ:ಸುರೇಶ್ ಕುಮಾರ್

ಬೆಂಗಳೂರು, ಜ.4-ಪ್ರಸ್ತುತ ವರ್ಷದ ಶಾಲಾರಂಭದ ನಾಲ್ಕನೇ ದಿನವಾದ ಸೋಮವಾರ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿಂದು ಈ ಕುರಿತು ಮಾಹಿತಿ ನೀಡಿದ ಸಚಿವರು, ಶಾಲಾಕಾಲೇಜುಗಳನ್ನು ಆರಂಭಿಸಿರುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಂತಾಗಿದೆ. ರಾಜ್ಯದಲ್ಲಿರುವ 5492 ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗಿರುವ 3,62,704 ವಿದ್ಯಾರ್ಥಿಗಳ ಪೈಕಿ ಸೋಮವಾರ 1,99,553 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಹಾಗೇ, 16,850 ಪ್ರೌಢಶಾಲೆಗಳಲ್ಲಿ 10ನೇ ತರಗತಿಗೆ ದಾಖಲಾಗಿರುವ 9,29,130 ವಿದ್ಯಾರ್ಥಿಗಳ ಪೈಕಿ 4,81,728 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. (ಶೇ. 51.95 ಹಾಜರಾತಿ) ಎಂದು ಹೇಳಿದರು.

6ರಿಂದ 9ನೇ ತರಗತಿಗಳಿಗೆ ನಡೆಯುತ್ತಿರುವ ಪರಿಷ್ಕೃತ ವಿದ್ಯಾಗಮ ತರಗತಿಗಳಿಗೆ ಸೋಮವಾರ 4,71,823 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದ ಅವರು, ವಿದ್ಯಾಗಮ ತರಗತಿಗಳೂ ಸಹ ಸುರಕ್ಷಿತ ವಾತಾವರಣದಲ್ಲಿ ನಡೆಯುತ್ತಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಹೆಚ್ಚಿನ ಮಕ್ಕಳು ಹಾಜರಾಗುತ್ತಿದ್ದಾರೆ ಎಂದು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆಯ ಒಬ್ಬ ಶಿಕ್ಷಕರು ಮತ್ತು ಕಳಸಾ ತಾಲೂಕಿನ ಖಾಸಗಿ ಶಾಲೆಯ ಇಬ್ಬರು ಶಿಕ್ಷಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅದೇರೀತಿ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಿಕ್ಕ ಕುರುವತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಒಂದು ಖಾಸಗಿ ಶಾಲೆಯ ಒಬ್ಬೊಬ್ಬ ಶಿಕ್ಷಕರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಈ ಶಾಲೆಗಳನ್ನು ಮುಂದಿನ ಸೋಮವಾರದಿಂದ ಆರಂಭಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.