ನಾಲೆಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ


ತಿಪಟೂರು, ನ. ೨೦- ಅಂತರ್ಜಾತಿ ವಿವಾಹಕ್ಕೆ ಮನೆಯವರು ವಿರೋಧಿಸಿದ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ನೊಣವಿನಕೆರೆ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಡೆದಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಗ್ರಾಮದ ಸುಶ್ಮಿತಾ (೧೮) ಹಾಗೂ ತಿಪಟೂರು ತಾಲ್ಲೂಕಿನ ಮತಿಘಟ್ಟ ಗ್ರಾಮದ ರಮೇಶ್ (೧೯) ಎಂಬುವರೇ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಗಳು.
ಐಟಿಐ ವ್ಯಾಸಂಗ ಮಾಡುತ್ತಿದ್ದ ರಮೇಶ್ ಹಾಗೂ ಪದವಿ ಓದುತ್ತಿದ್ದ ಸುಶ್ಮಿತಾ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಪ್ರೇಮಿಗಳಿಬ್ಬರು ಬೇರೆ ಬೇರೆ ಕೋಮಿನವರಾಗಿದ್ದು, ಮನೆಯಲ್ಲಿ ಇವರ ವಿವಾಹಕ್ಕೆ ಅನುಮತಿ ನೀಡುವುದಿಲ್ಲ ಎಂದು ತೀವ್ರ ಭಯಭೀತರಾಗಿದ್ದರೆನ್ನಲಾಗಿದೆ.
ಇವರಿಬ್ಬರು ಕಾಣೆಯಾಗಿರುವ ಬಗ್ಗೆ ನ. ೧೬ ರಂದು ಚನ್ನರಾಯಪಟ್ಟಣ ತಾಲ್ಲೂಕು ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಾಗೂರು ಸುರಂಗ ಬಳಿ ಬೈಕ್ ನಿಲ್ಲಿಸಿರುವ ಪ್ರೇಮಿಗಳು ಚಪ್ಪಲಿ ಬಿಟ್ಟು ಒಬ್ಬರಿಗೊಬ್ಬರು ಅಪ್ಪಿಕೊಂಡೆ ನಾಲೆಗೆ ಜಿಗಿದಿದ್ದಾರೆ ಎಂದು ಹೇಳಲಾಗಿದ್ದು, ಪ್ರೇಮಿಗಳ ಮೃತ ದೇಹ ನಾಲೆಯಲ್ಲಿ ತೇಲಿ ಹೋಗುವ ವಿಡಿಯೋ ವೈರಲ್ ಆಗಿತ್ತು. ಹೇಮಾವತಿ ನಾಲೆಯಲ್ಲಿ ಶವಗಳು ತೇಲಿ ಹೋಗುತ್ತಿರುವುದನ್ನು ಕಂಡ ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಈ ಸುದ್ದಿ ತಿಳಿದ ನೊಣವಿನಕೆರೆ ಪೊಲೀಸರು ಸ್ಥಳಕ್ಕೆ ಧಾವಿಸಿ ನಾಲೆಯಿಂದ ಶವಗಳನ್ನು ಹೊರ ತೆಗೆಯುವಲ್ಲಿ ಶ್ರಮಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನೊಣವಿನಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.