ನಾಲೆಗೆ ಕಾರು, ಸತ್ತವರ ಕುಟುಂಬಕ್ಕೆ 2 ಲಕ್ಷ ಪರಿಹಾರ ಸಿಎಂ ಘೋಷಣೆ

ಬೆಂಗಳೂರು,ಜು.೩೦:ಮಂಡ್ಯದ ವಿಶ್ವೇಶ್ವರಯ್ಯ ನಾಲೆಗೆ ಕಾರು ಉರುಳಿ ನಾಲ್ವರು ಸಾವನ್ನಪ್ಪಿದ್ದು, ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ ೨ ಲಕ್ಷ ಪರಿಹಾರ ಘೋಷಿಸಿದ್ದಾರೆ.
ಮಂಡ್ಯ ಜಿಲ್ಲೆಯ ದೊಡ್ಡಮುಲಗೋಡು ಮತ್ತು ಗಾಮನಹಳ್ಳಿ ನಡುವಿನ ವಿ.ಸಿ ನಾಲೆಗೆ ನಿನ್ನೆ ರಾತ್ರಿ ಕಾರು ಉರುಳಿ ಬಿದ್ದು, ನಾಲ್ಕು ಮಂದಿ ಮಹಿಳೆಯರು ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಮೃತಪಟ್ಟವರನ್ನು ಟೀ ನರಸೀಪುರ ತಾಲ್ಲೂಕು ಗೊರವನಹಳ್ಳಿ ಗ್ರಾಮದ ದೊಡ್ಡಯ್ಯ ಎಂಬುವರ ಪತ್ನಿ ಮಹದೇವಮ್ಮ, ಸಂಬಂಧಿಕರಾದ ರೇಖಾ, ಸಂಜನಾ, ಮಾದೇವಿ ಇವರುಗಳು ಮೃತಪಟ್ಟಿದ್ದರು. ಕಾರು ಚಾಲಕ ಮನೋಜ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತಪಟ್ಟ ನಾಲ್ವರು ಮಹಿಳೆಯರ ಶವವನ್ನು ನಾಲೆಯ ನೀರಿನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ಈ ಸಂಬಂಧ ಹರಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೃತದೇಹಗಳ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟಣಾ ಸ್ಥಳಕ್ಕೆ ಶಾಸಕ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ್, ಎಸ್ಪಿ ಯತೀಶ್ ಭೇಟಿ ನೀಡಿದ್ದಾರೆ.
ಆದಿಚುಂಚನಗಿರಿಯಲ್ಲಿ ಮಹದೇವಮ್ಮ ಅವರ ಮನೆಯವರು ಆಯೋಜನೆ ಮಾಡಲಿದ್ದ ದೇವರ ಕಾರ್ಯಕ್ಕೆ ಸಂಬಂಧಿಕರನ್ನು ಆಹ್ವಾನಿಸಲು ಗೊರವನಹಳ್ಳಿಯಿಂದ ದೊಡ್ಡಮುಲಗೋಡಿಗೆ ಇವರೆಲ್ಲ ಕಾರಿನಲ್ಲಿ ತೆರಳುತ್ತಿದ್ದರು. ನಿಯಂತ್ರಣ ತಪ್ಪಿ ಕಾರು ನಾಲೆಗೆ ಬಿದ್ದಿದೆ ಎನ್ನಲಾಗಿದೆ.
ಸರ್ಕಾರದಿಂದ ೨ ಲಕ್ಷ ರೂ. ಪರಿಹಾರ
ಮೃತಪಟ್ಟ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ೨ ಲಕ್ಷ ರೂ. ಹಾಗೂ ತಾವು ವೈಯಕ್ತಿವಾಗಿ ೫೦ ಸಾವಿರರೂ. ಪರಿಹಾರ ನೀಡುವುದಾಗಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಘೋಷಿಸಿದ್ದಾರೆ. ನನ್ನ ಮತ್ತು ಸಚಿವ ಮಹದೇವಪ್ಪ ಅವರ ಮನವಿ ಮೇರೆಗೆ ಮುಖ್ಯಮಂತ್ರಿಗಳು ೨ ಲಕ್ಷ ರೂ. ಪರಿಹಾರ ನೀಡುವಂತೆ ಮಂಡ್ಯಜಿಲ್ಲೆ ಡಿಸಿಗೆ ಸೂಚನೆ ನೀಡಿದ್ದು, ವೈಯಕ್ತಿಕವಾಗಿ ತಲಾ ಸಹ ೫೦ ಸಾವಿರ ರೂ. ಪರಿಹಾರ ನೀಡುವುದಾಗಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.