ನಾಲಿಗೆ, ಕಿವಿ ಹಿಡಿತದಲ್ಲಿರಲಿ: ಹಾವಗಿಲಿಂಗೇಶ್ವರ ಶ್ರೀ

ಬೀದರ್:ಆ.4: ಮನುಷ್ಯ ನಾಲಿಗೆ ಹಾಗೂ ಕಿವಿಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದು ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.

ಶ್ರಾವಣ ಅಧಿಕ ಮಾಸ ಹಾಗೂ ಹುಣ್ಣಿಮೆ ಪ್ರಯುಕ್ತ ಹೈದರಾಬಾದ್‍ನ ಜಿಯಾಗುಡಾದ ನಾಗಲಿಂಗೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ನಾಲಿಗೆಗೆ ಎಲುಬಿಲ್ಲವೆಂದು ಏನೇನೋ ಮಾತನಾಡಲಾಗದು. ಮುಚ್ಚಳ ಇಲ್ಲದ ಕಿವಿ ಅನಗತ್ಯವಾದುದ್ದನ್ನು ಕೇಳುವುದಕ್ಕಲ್ಲ ಎಂದು ಹೇಳಿದರು.

ನಾಲಿಗೆ ಒಳ್ಳೆಯದಿದ್ದರೆ ನಾಡೆಲ್ಲ ಒಳ್ಳೆಯದು ಎಂಬ ಗಾದೆ ಇದೆ. ಶರಣರು ಮಾತನ್ನು ಜ್ಯೋತಿರ್ಲಿಂಗಕ್ಕೆ ಹೋಲಿಸಿದ್ದಾರೆ. ಮಾತಿನ ಮಹತ್ವ ಬಹಳ ಇದೆ. ಹೀಗಾಗಿ ಯೋಚಿಸಿ ಮಾತನಾಡಬೇಕು. ಒಳ್ಳೆಯ ಮಾತನ್ನೇ ಆಡಬೇಕು. ಬೇಕಾಬಿಟ್ಟಿ ನಾಲಿಗೆ ಹರಿಯಬಿಟ್ಟರೆ ಬೆಲೆ ತೆರಬೇಕಾಗುತ್ತದೆ ಎಂದರು.

ಮಾತು ಮಧುರವಾಗಿರಬೇಕು. ಮನಸ್ಸು ಅರಳಿಸುವಂತಿರಬೇಕು. ದುಃಖ ಕಡಿಮೆ ಮಾಡಬೇಕು. ಬೇರೆಯವರ ಬಾಳಿಗೆ ಬೆಳಕಾಗಬೇಕು ಎಂದು ಕಿವಿಮಾತು ಹೇಳಿದರು.

ಕಿವಿಯಲ್ಲಿ ಸಂಬಂಧವಿಲ್ಲದ್ದನ್ನು ಕೇಳಬಾರದು. ಒಳ್ಳೆಯ ಮಾತುಗಳನ್ನು ಕೇಳಬೇಕು. ವಚನ, ಪ್ರವಚನ, ಸಾಧು, ಸಂತರ ವಾಣಿಯನ್ನು ಆಲಿಸಬೇಕು ಎಂದು ತಿಳಿಸಿದರು.

ಜೀವನ ಬಹಳ ಅಮೂಲ್ಯವಾಗಿದೆ. ಅದಕ್ಕೆ ಮೌಲ್ಯ ಬರುವ ಹಾಗೆ ಬದುಕಬೇಕು. ಸನ್ಮಾರ್ಗದಲ್ಲಿ ನಡೆಯಬೇಕು. ಸತ್ಕಾರ್ಯಗಳನ್ನು ಮಾಡಬೇಕು. ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.

ಉದ್ಯಮಿ ಶ್ರೀಕಾಂತ ಕುಡತೆ ಉದ್ಘಾಟಿಸಿದರು. ಪ್ರಮುಖರಾದ ಸಂಜು ಪಾಟೀಲ, ಶಿವಾಜಿ ಬಿರಾದಾರ, ಮಹೇಶ ಹೂಗಾರ, ಶಿವಾಜಿ ಟೇಲರ್, ಬಾಬುರಾವ್ ನಾವದಗಿ ಮೊದಲಾದವರು ಇದ್ದರು.