ನಾರ್ಡ್ ಸ್ಟ್ರೀಮ್ ಪೈಪ್‌ಲೈನ್ ಸ್ಫೋಟದಲ್ಲಿ ನಮ್ಮ ಪಾತ್ರವಿಲ್ಲ

ನ್ಯೂಯಾರ್ಕ್, ಮಾ.೮- ರಷ್ಯಾದಿಂದ ಯುರೋಪ್‌ಗೆ ಪೂರೈಕೆಯಾಗುತ್ತಿದ್ದ ನಾರ್ಡ್ ಸ್ಟ್ರೀಮ್ ಪೈಪ್‌ಲೈನ್‌ಗಳ ಮೇಲಿನ ದಾಳಿ ನಡೆಸಿದ ಆರೋಪವನ್ನು ಇದೀಗ ಯುಕ್ರೇನ್ ತಳ್ಳಿಹಾಕಿದೆ. ಈ ದಾಳಿಯಲ್ಲಿ ನಾವು ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ.
ಯುರೋಪ್‌ಗೆ ರಷ್ಯಾದ ಗ್ಯಾಸ್ ಪೂರೈಕೆಯಾಗುತ್ತಿದ್ದ ಪೈಪ್‌ಲೈನ್‌ಗಳ ಮೇಲೆ ಕಳೆದ ಸೆಪ್ಟೆಂಬರ್ ೨೬ರಂದು ದೊಡ್ಡ ರೀತಿಯ ದಾಳಿ ನಡೆಸಲಾಗಿತ್ತು. ಸದ್ಯ ದಾಳಿಯನ್ನು ಉಕ್ರೇನ್ ವತಿಯಿಂದಲೇ ನಡೆಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಆದರೆ ಇದನ್ನು ಉಕ್ರೇನ್ ತಳ್ಳಿಹಾಕಿದೆ. ವರದಿಯ ಪ್ರಕಾರ, ಅಮೆರಿಕಾದ ಅನಾಮಧೇಯ ಗುಪ್ತಚರ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ, ಉಕ್ರೇನ್ ಪರವಾದ ಗುಂಪೊಂದು ಈ ದಾಳಿ ನಡೆಸಿದೆ ಎಂದು ವರದಿ ಪ್ರಕಟಿಸಲಾಗಿತ್ತು. ಆದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಥವಾ ಉನ್ನತ ಮಿಲಿಟರಿ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವ ಯಾವುದೇ ಸಾಕ್ಷ್ಯಗಳಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ಅಲ್ಲದೆ ಜರ್ಮನ್ ಮಾಧ್ಯಮಗಳ ಇತ್ತೀಚಿಗಿನ ವರದಿಯ ಪ್ರಕಾರ, ಸ್ಫೋಟಕ್ಕೆ ಬಳಸದಾದ ದೋಣಿಯನ್ನು ಅಧಿಕಾರಿಗಳು ಇದೀಗ ಗುರುತಿಸಿಕೊಂಡಿದ್ದಾರೆ ಎಂದು ವರದಿ ಮಾಡಲಾಗಿದೆ. ಇನ್ನು ಗ್ಯಾಸ್ ಪೈಪ್‌ಲೈನ್‌ಗಳ ಮೇಲಿನ ದಾಳಿಯ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಇವುಗಳ ಮೇಲೆ ಉದ್ದೇಶಪೂರ್ವಕವಾಗಿಯೇ ದಾಳಿ ನಡೆಸಲಾಗಿದೆ ಎಂದೇ ಇದೀಗ ಎಲ್ಲೆಡೆ ಸುದ್ದಿ ಹಬ್ಬಿದೆ. ದಾಳಿಯನ್ನು ರಷ್ಯಾ ತೀವ್ರವಾಗಿ ಖಂಡಿಸಿದ್ದು, ಪಾಶ್ಚಿಮಾತ್ಯ ದೇಶಗಳತ್ತ ಬೊಟ್ಟು ಮಾಡಿದೆ. ಅಲ್ಲದೆ ಸ್ವತಂತ್ರ ತನಿಖೆ ನಡೆಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ. ಇನ್ನು ಅದೃಷ್ಟವಶಾತ್ ದಾಳಿಯ ವೇಳೆ ಗ್ಯಾಸ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಸಂಭಾವ್ಯ ಅಪಾಯ ತಪ್ಪಿದಂತಾಗಿತ್ತು.