ನಾರ್ಕೋಡು-ಕನ್ನಡಿತೋಡು ರಸ್ತೆ ಕಾಮಗಾರಿ ಸ್ಥಗಿತ ಶೀಘ್ರ ಕಾಮಗಾರಿಗೆ ನಾಗರಿಕರಿಂದ ಒತ್ತಾಯ

ಸುಳ್ಯ, ಜ.೧೦- ಸುಳ್ಯದ ನಾರ್ಕೋಡು- ಕೋಲ್ಚಾರು- ಕನ್ನಡಿತೋಡು ಸಂಪರ್ಕದ ಲೋಕೋಪಯೋಗಿ ರಸ್ತೆಯ ಕಾಮಗಾರಿ ಕೆಲಸ ಸ್ಥಗಿತಗೊಂಡಿದ್ದು, ಸರ್ವಋತು ರಸ್ತೆಯ ಕೆಲಸವನ್ನು ಕೂಡಲೇ ಆರಂಭಿಸಬೇಕು ಎನ್ನುವ ಕೂಗು ನಾಗರಿಕರಿಂದ ಕೇಳಿಬಂದಿದೆ.
ನಾರ್ಕೋಡು-ಕನ್ನಡಿತೋಡು ರಸ್ತೆ ಕಾಮಗಾರಿಗೆ ಕಳೆದ ೭ ತಿಂಗಳ ಹಿಂದೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಬಳಿಕ ಕೊರೊನಾ ಕಾರಣದಿಂದ ಕೆಲಸ ಆರಂಭಗೊಂಡಿರಲಿಲ್ಲ. ಇದೀಗ ೧೦.೫ ಕೋಟಿ ಅನುದಾನ ಬಿಡುಗಡೆಗೊಂಡ್ಡಿದ್ದು, ಸರ್ವಋತು ರಸ್ತೆಯನ್ನು ನಿರ್ಮಿಸಲು ಪಂಚಾಯಿತಿ ಚುನಾವಣೆಗೆ ಮೊದಲೇ ರಸ್ತೆ ಅಗಲೀಕರಣದ ಕೆಲಸವನ್ನು ಜೆ.ಸಿ.ಬಿ ಮೂಲಕ ಆರಂಭಿಸಲಾಗಿತ್ತು. ಕೆಲಸ ಆರಂಭದೊಂದಿಗೆ ಅಲ್ಲಲ್ಲಿ ಮೋರಿ ರಚನೆಗೆ ಪೈಪುಗಳನ್ನು ತಂದು ಹಾಕಲಾಗಿತ್ತು.
ಆದರೆ ಚುನಾವಣೆಯ ಸಂದರ್ಭದಲ್ಲಿ ರಸ್ತೆ ಕಾಮಗಾರಿಯ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರು ಕೆಲಸ ಅರ್ಧಕ್ಕೆ ನಿಲ್ಲಿಸಿ ಹೋಗಿರುವುದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರ ಸಂಚಾರಕ್ಕೆ ಸಂಕಷ್ಟದ ಸ್ಥಿತಿ ಎದುರಾಗಿದೆ. ಇದೀಗ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಯೆಲ್ಲಾ ಕೆಸರುಮಯವಾಗಿ ವಾಹನ ಸವಾರರು ಪ್ರಯಾಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗೆ ಈ ಭಾಗದ ಜನರು ಆಕ್ರೋಶಭರಿತರಾಗಿದ್ದಾರೆ.