ನಾರಿಯರಿಗೆ ನಾಳೆಯಿಂದ ಬಸ್ ಪ್ರಯಾಣ ಫ್ರೀ

ಬೆಂಗಳೂರು, ಜೂ. ೧೦- ರಾಜ್ಯದ ಎಲ್ಲ ಮಹಿಳೆಯರು ನಾಳೆಯಿಂದ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಭರವಸೆ ನೀಡಿ, ಶಕ್ತಿ ಯೋಜನೆಯನ್ನು ಘೋಷಣೆ ಮಾಡಿತ್ತು. ಅದರಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ನಾಳೆ ಚಾಲನೆ ನೀಡಲಾಗುತ್ತಿದ್ದು, ನಾಳೆ ಮಧ್ಯಾಹ್ನ ೧ ಗಂಟೆಯಿಂದ ರಾಜ್ಯಾದ್ಯಂತ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆ ಪ್ರಪ್ರಥವಾಗಿ ನಾಳೆಯಿಂದ ಜಾರಿಯಾಗುತ್ತಿದ್ದು, ಉಳಿದ ನಾಲ್ಕು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೂ ಸರ್ಕಾರ ಕ್ರಮ ಕೈಗೊಂಡಿದ್ದು ಎಲ್ಲ ಗ್ಯಾರಂಟಿ ಯೋಜನೆಗಳು ಆಗಸ್ಟ್ ತಿಂಗಳೊಳಗೆ ಜಾರಿಯಾಗಲಿವೆ. ಈಗಾಗಲೇ ಜುಲೈನಿಂದ ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಯೋಜನೆ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದು, ಗೃಹಲಕ್ಷ್ಮಿ ಯೋಜನೆ ಆಗಸ್ಟ್ ೧೭ ರಿಂದ ಜಾರಿಯಾಗಲಿದೆ.ನಾಳೆ ವಿಧಾನಸೌಧದ ಮುಂದೆ ಸಿಎಂ ಚಾಲನೆ ನಾಳೆ ಶಕ್ತಿ ಯೋಜನೆಯನ್ನು ವಿಧಾನಸೌಧದ ಮುಂಭಾಗ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡುವರು. ಹಾಗೆಯೇ ಸಾಂಕೇತಿಕವಾಗಿ ಕೆಲ ಮಹಿಳೆಯರಿಗೆ ಶಕ್ತಿ ಯೋಜನೆಯ ಸ್ಮಾರ್ಟ್‌ಕಾರ್ಡ್‌ನ್ನು ವಿತರಿಸುವರು.ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಏಕ ಕಾಲದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಉಸ್ತುವಾರಿ ಸಚಿವರುಗಳು ಶಕ್ತಿ ಯೋಜನೆಗೆ ಚಾಲನೆ ನೀಡುವರು.ನಾಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಕ್ತಿ ಯೋಜನೆಗೆ ಚಾಲನೆ ನೀಡಿದ ನಂತರ ಮಧ್ಯಾಹ್ನ ೧ ಗಂಟೆಯಿಂದಲೇ ರಾಜ್ಯಾದ್ಯಂತ ಎಲ್ಲ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು.ಶಕ್ತಿ ಯೋಜನೆಯ ಉಚಿತ ಪ್ರಯಾಣ ರಾಜ್ಯದ ಮಹಿಳೆಯರಿಗೆ ಮಾತ್ರ ಇದ್ದು, ವಿದ್ಯಾರ್ಥಿನಿಯರಿಗೆ ಮತ್ತು ಮಂಗಳ ಮುಖಿಯರಿಗೂ ಅನ್ವಯಿಸಲಿದೆ. ಹೊರ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಇಲ್ಲ. ಐದು ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳೂ ಉಚಿತವಾಗಿ ಪ್ರಯಾಣಿಸಬಹುದು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗಧೂತ ,ತಡೆರಹಿತ ಸಾರಿಗೆಗಳು ಒಳಗೊಂಡ ಬಸ್‌ಗಳಲ್ಲಿ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಅಂಬಾರಿ, ಅಂಬಾರಿ ಡ್ರೀಂ ಕ್ಲಾಸ್, ಐರಾವತ, ಕ್ಲಬ್ ಕ್ಲಾಸ್, ರಾಜಹಂಸ, ಎಸಿ ಬಸ್, ನಾನ್ ಎಸಿ ಸ್ಪೀಪರ್ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ.ಮಹಿಳಾ ಪ್ರಯಾಣಿಕರಿಗೆ ರಾಜ್ಯದೊಳಗೆ ಪ್ರಯಾಣಿಸಲು ಯಾವುದೇ ದೂರದ ಮಿತಿ ಇರುವುದಿಲ್ಲ. ಆದರೆ, ಅಂತಾರಾಜ್ಯ ಸಾರಿಗೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ.
ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ನಾಳೆಯಿಂದ ಮಹಿಳೆಯರು ಆಧಾರ್ ಕಾರ್ಡ್, ಮತದಾದರ ಗುರುತಿನ ಚೀಟಿ, ಚಾಲನಾ ಪತ್ರ ಸೇರಿದಂತೆ ಭಾರತ ಸರ್ಕಾರ ಅಥವಾ ಕರ್ನಾಟಕ ಸರ್ಕಾರ ವಿತರಿಸಿರುವ ಯಾವುದಾದರು ಒಂದು ಗುರುತಿನ ಚೀಟಿಗಳನ್ನು ತೋರಿಸಿ ಪ್ರಯಾಣಿಸಬಹುದು. ನಂತರ ಮಹಿಳಾ ಪ್ರಯಾಣಿಕರಿಗೆ ಮೂರು ತಿಂಗಳೊಳಗೆ ಸಾರಿಗೆ ಸಂಸ್ಥೆ ಶಕ್ತಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಿದೆ.ಮಹಿಳಾ ಪ್ರಯಾಣಿಕರು ಶಕ್ತಿ ಸ್ಮಾರ್ಟ್ ಕಾರ್ಡ್‌ಗಾಗಿ ಸೇವಾ ಸಿಂಧು ಪೋರ್ಟ್‌ಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಬೆಂಗಳೂರು-೧ ಅಥವಾ ಯಾವುದಾದರೂ ಸೈಬರ್ ಸೆಂಟರ್‌ಗೆ ಭೇಟಿ ನೀಡಿ ಸೇವಾ ಸ್ಮಾಟ್‌ಕಾರ್ಡ್‌ಗೆ ನೋಂದಣಿ ಮಾಡಿಕೊಳ್ಳಬೇಕು.
ಆಧಾರ್ ಕಾರ್ಡ್ ಅಥವಾ ಅರ್ಡಸ್ ಪ್ರೂಫ್ ಇರುವ ಯಾವುದಾದರು ಒಂದು ಗುರುತಿನ ಚೀಟಿ ನೀಡಿದರೆ ಸ್ಮಾರ್ಟ್‌ಕಾರ್ಡ್‌ನ್ನು ಮಾಡಿಕೊಡಲಾಗುತ್ತದೆ. ಸರ್ಕಾರವೇ ಸ್ಮಾರ್ಟ್‌ಕಾರ್ಡ್‌ಗೆ ಆಗುವ ವೆಚ್ಚವನ್ನು ಭರಿಸಲಿದ್ದು, ಇದಕ್ಕೆ ಯಾರೂ ಹಣ ಪಾವತಿಸುವ ಅಗತ್ಯವಿಲ್ಲ.

ಸಿದ್ದು ಟಿಕೆಟ್ ವಿತರಿಸಲ್ಲ
ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಸ್ ಕಂಡಕ್ಟರ್ ಆಗಿ ಟಿಕೆಟ್ ವಿತರಿಸಲ್ಲ. ಬಸ್‌ನಲ್ಲಿ ಒಂದು ಸುತ್ತು ಓಡಾಡುತ್ತಾರೆ ಎಂದರು.ಬಸ್‌ಗಳಿಗೆ ಅವರದ್ದೇ ಆದ ಕಂಡಕ್ಟರ್ ಹಾಗೂ ಚಾಲಕರು ಇರುತ್ತಾರೆ. ಹಾಗಾಗಿ ಮುಖ್ಯಮಂತ್ರಿಗಳು ಬಸ್ ಕಂಡಕ್ಟರಾಗಿ ಟಿಕೆಟ್ ನೀಡುತ್ತಾರೆ ಎಂಬ ವರದಿಗಳನ್ನು ತಳ್ಳಿ ಹಾಕಿದ ಅವರು, ಸಿದ್ಧರಾಮಯ್ಯ ಬಸ್ ಕಂಡಕ್ಟರ್ ಆಗಿ ಕಾರ್ಯಭಾರ ನಿಭಾಯಿಸಿಲ್ಲ ಶಕ್ತಿ ಯೋಜನೆ ಉದ್ಘಾಟನೆ ಮಾಡಿ ಆ ಬಳಿಕ ಆ ಬಸ್‌ನಲ್ಲೆ ಒಂದು ಸುತ್ತು ಹೋಗುತ್ತಾರೆ. ಆ ಬಸ್‌ನಲ್ಲಿ ಪ್ರಯಾಣಿಕರು ಇರುತ್ತಾರೆ ಎಂದರು.ನಾಳಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಕೆಲವರಿಗೆ ಸ್ಮಾರ್ಟ್ ಕಾರ್ಡ್ ಕೊಡುತ್ತೇವೆ. ಎಲ್ಲರೂ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಲು ಮೂರು ತಿಂಗಳ ಅವಧಿ ನೀಡಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ಸ್ಮಾರ್ಟ್ ಕಾರ್ಡ್ ಪಡೆಯಲು ಮೂರು ತಿಂಗಳ ಅವಕಾಶವಿದೆ. ಆಧಾರ್ ಕಾರ್ಡ್ ಅಥವಾ ವಿಳಾಸ ಖಚಿತಪಡಿಸುವ ಗುರುತಿನ ಚೀಟಿಯನ್ನು ಬೆಂಗಳೂರು-೧ ಅಥವಾ ಯಾವುದೇ ಸೈಬರ್ ಸೆಂಟರ್‌ಗೆ ಹೋಗಿ ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಯಾವುದಾದರೂ ಸರ್ಕಾರದ ಗುರುತಿನ ಚೀಟಿ ತೋರಿಸಿ ಸ್ಮಾರ್ಟ್‌ಕಾರ್ಯ್ ನೋಂದಣಿ ಮಾಡಿಸಿಕೊಳ್ಳಬಹುದು.