ನಾರಾಯಣ ನೇತ್ರಾಲಯದಲ್ಲಿ ಜೀನ್ ಥೆರಪಿ

(ಸಂಜೆವಾಣಿ ಪ್ರತಿನಿಧಿಯಿಂದ)


ಬೆಂಗಳೂರು,ಜು.೨೭:ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಜೀನ್ ಥೆರಪಿ ಚಿಕಿತ್ಸೆಯನ್ನು ಆರಂಭಿಸಲಾಗಿದೆ. ಜೀನ್ ಥೆರಪಿ ಚಿಕಿತ್ಸೆಗೆ ಕೊಟ್ಯಂತರ ರೂಪಾಯಿ ವೆಚ್ಚವಾಗುತ್ತಿದ್ದು, ಭಾರತೀಯ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಜೀನ್ ಥೆರಪಿಯನ್ನು ಆರಂಭಿಸಲಾಗಿದೆ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ರೋಹಿತ್‌ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೀನ್ ಥೆರಪಿಯ ಮೊಟ್ಟ ಮೊದಲ ಪ್ರಯಾಣವನ್ನು ಆರಂಭಿಸುತ್ತಿದ್ದೇವೆ. ನಾವಿನ್ಯತೆ ಮತ್ತು ಉತ್ಕೃಷ್ಟತೆಗೆ ಹೆಸರಾದ ನಾರಾಯಣ ನೇತ್ರಾಲಯ ಭಾರತದ ಮೊದಲ ಸಂಪೂರ್ಣ ಸ್ಥಳೀಯ ಜೀನ್ ಥೆರಪಿ ಕಾರ್ಯಕ್ರಮವನ್ನು ಪರಿಚಯಿಸಲು ಹೆಮ್ಮೆ ಪಡುತ್ತದೆ. ತಮ್ಮ ಈ ಪ್ರಯೋಗಾಲಯವು ಜೀನ್ ಥೆರಪಿಯ ಹಿಂದಿರುವ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲು ಮತ್ತು ವಿವಿಧ ನೇತ್ರ ಇತರ ಅನುವಂಶಿತ ಕಾಯಿಲೆಗಳಿಗೆ ಭಾರತದಲ್ಲಿ ಔಷಧಗಳನ್ನು ಉತ್ಪಾದಿಸಲು ಸಮರ್ಪಿಸಲಾಗಿದೆ ಎಂದರು.
ಜೀನ್ ಚಿಕಿತ್ಸಾ ಕೇಂದ್ರದ ಉದ್ದೇಶ ಚಿಕಿತ್ಸೆಗಳನ್ನು ಸುಧಾರಿಸುವ ಮತ್ತು ಕುರುಡುತನಕ್ಕೆ ಕಾರಣವಾಗುವ ಅನುವಂಶಿತ ಕಾಯಿಲೆಗಳ ಪ್ರಭಾವವನ್ನು ಕಡಿಮೆ ಮಾಡುವ ಪರಿಹಾರ ಕಂಡು ಹಿಡಿಯುವುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ.ನರೇನ್‌ಶೆಟ್ಟಿ, ಗ್ರೂಪ್ ಕ್ಯಾಪ್ಟನ್ ಎಸ್.ಕೆ ಮಿತ್ತಲ್, ಡಾ. ನರೇಂದ್ರ ಉಪಸ್ಥಿತರಿದ್ದರು.