ನಾರಾಯಣಪುರ ಬಲದಂಡೆ ೫ಎ ಕಾಲುವೆ ಜಾರಿಗೆ ಆಗ್ರಹ

ಇಂದು ರೈತರ ಜನ ಜಾಗೃತಿ ಜಾಥಾ- ನಾಗರೆಡ್ಡಪ್ಪ ದೇವರಮನಿ
ರಾಯಚೂರು,ಅ.೨೮- ಸತತ ಬರಗಾಲ ಅನುಭವಸುತ್ತಿರುವ ಹೈದ್ರಾಬಾದ್ ಕರ್ನಾಟಕ ಭಾಗದ ರಾಯಚೂರ ಹಾಗೂ ಕೊಪ್ಪಳ ಜಿಲ್ಲೆಯ ರೈತರ ಬದುಕು ಬೀದಿಗೆ ಬಿದ್ದಿದ್ದು, ನಾಳೆ ಪಾಮನಕಲ್ಲೂರಿನ ಬಸವೇಶ್ವರ ದೇವಸ್ಥಾನದಿಂದ ರೈತರ ಜನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ನೀರಾವರಿ ಸಂಘದ ನಾಗರೆಡ್ಡಪ್ಪ ದೇವರಮನಿ ಹೇಳಿದರು.
ಅವರಿಂದು ಮಾಧ್ಯಮ ಘೋಷ್ಠಿ ಉದ್ಧೇಶಿಸಿ ಮಾತನಾಡಿ ಚುನಾವಣೆ ಬಂದಾಗ ಮಾತ್ರ ಪ್ರಚಾರದಲ್ಲಿ ಆಶ್ವಾಸನೆ ನೀಡಿ ಗೆದ್ದ ನಂತರ ಕ್ರಮ ಕೈಗೊಳ್ಳದ ರಾಜಕಾರಣಿಗಳಿಗೆ ರೈತರ ನೋವು ತಿಳಿಯಬೇಕಾಗಿದೆ. ಘನತೆಯಿಂದ ಬದುಕು ನಡೆಸಬೇಕಾದ ರೈತರು, ಗಂಟು ಮೂಟೆ ಕಟ್ಟಿಕೊಂಡು ಮಹಾನಗರಗಳಿಗೆ ಗುಳೇ ಹೋಗಿವೆ. ಹೇರುಗಟ್ಟಲೇ ಜೋಳ, ಸಜ್ಜೆ ಧಾನ್ಯ ಬೆಳೆಯುತ್ತಿದ್ದ ರೈತರ ಮನೆಯಲ್ಲಿಗ ಸೇರು ಜೋಳ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ೧೦ ವರ್ಷಗಳಿಂದ ಎನ್‌ಆರ್‌ಬಿಸಿ ೫ಎ ಕಾಲುವೆ ಯೋಜನೆ ಜಾರಿಗೆ ಆಗ್ರಹಿಸಿ ರೈತರು ಅವಿರತ ಹೋರಾಟ ನಡೆಸುತ್ತಿದ್ದರೂ ಮೂರು ಪ್ರಮುಖ ಪಕ್ಷಗಳು, ರಾಜಕಾರಣಿಗಳು ಯಾವುದೆ ಬೆಲೆ ನೀಡದಿರುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಎಲ್ಲಾ ಗ್ರಾಮಗಳಿಗೆ ತೆರಳಿ ರೈತರಲ್ಲಿ ಜಾಗೃತಿ ಮೂಡಿಸಲು ರೈತರ ಜನ ಜಾಗೃತಿ ಜಾಥ ಕಾರ್ಯಕ್ರಮವನ್ನು ಅ.೨೯ರಂದು ಹಮ್ಮಿಕೊಳ್ಳಳಾಗಿದೆ. ಈ ಜಾಥವು ಅಂದು ಬೆಳಿಗ್ಗೆ ೧೦ ಗಂಟೆಗೆ ಪಾಮನಕಲ್ಲೂರಿನ ಬಸವೇಶ್ವರ ದೇವಾಸ್ಥಾನದ ಪ್ರಾರಂಭವಾಗಲಿದೆ ಎಂದರು.
ಎನ್‌ಆರ್‌ಬಿಸಿ ೫ಎ ನಾಲೆ ಯೋಜನೆ ಜಾರಿಗೊಂಡರೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ೭ ತಾಲೂಕುಗಳ ೧೦೭ ಗ್ರಾಮಗಳ ೭೨ ಸಾವಿರ ಹೇಕ್ಟೇರ್ ಪ್ರದೇಶಕ್ಕೆ ನೀರಾವರಿ ವ್ಯಾಪ್ತಿಗೊಳಪಟ್ಟು ಈ ಭಾಗದ ಜನರ ಬವಣೆ ತಪ್ಪಲಿದೆ. ನೀರು ನಮ್ಮಲ್ಲೆರ ಹಕ್ಕು. ಕೃಷಿ ಕ್ಷೇತ್ರಕ್ಕೆ ಸಮರ್ಪಕ ಬಳಕೆಯಾಗಬೇಕು. ಯೋಜನೆ ಜಾರಿಯಾಗುವವರೆಗೂ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜಪ್ಪಗೌಡ ಹರ್ವಾಪುರ, ಎನ್.ಶಿವನಗೌಡ ವಟಗಲ್, ಕುಶಪ್ಪ ಅಮೀನಗಡ ಉಪಸ್ಥಿತರಿದ್ದರು.