ನಾರಾಯಣಪುರ ಬಲದಂಡೆ ಕಾಲುವೆಗೆ

ಚಾಲು, ಬಂದ್ ಪ್ರಕಾರ ಮಾರ್ಚ್ ೨೧ ರ ವರೆಗೆ ನೀರು
ರಾಯಚೂರು,.೨೨- ೨೦೨೦-೨೧ನೇ ಸಾಲಿನ ಹಿಂಗಾರು ಹಂಗಾಮಿಗಾಗಿ ನಾರಾಯಣಪುರ ಬಲದಂಡೆ ವಿತರಣಾ ಕಾಲುವೆಯ ೯(ಎ), ೧೫,೧೬,೧೭ ಮತ್ತು ೧೮ ರಲ್ಲಿ ಚಾಲು ಬಂದ್ ಪದ್ದತಿಯಂತೆ ನೀರು ೨೦೨೧ರ ಮಾರ್ಚ್ ೨೧ರ ವರೆಗೆ ನೀರು ಹರಿಸಲು ನಿರ್ಧರಿಸಲಾಯಿತು.
೨೦೨೦ರ ನ. ೧೩ ರಂದು ಆಲಮಟ್ಟಿಯ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಕಚೇರಿಯಲ್ಲಿ ಉಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ.ಎಂ.ಕಾರಜೋಳ, ಇವರ ಅಧ್ಯಕ್ಷತೆಯಲ್ಲಿ ೨೦೨೦-೨೧ನೇ ಸಾಲಿನ ಹಿಂಗಾರು ಹಂಗಾಮಿಗಾಗಿ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಯಿತು.
ನಾರಾರ್ಯಣಪುರ ಬಲದಂಡೆ ಕಾಲುವೆಯ ಕಿ.ಮೀ.೮೨ ರಿಂದ ೯೫ರ ವರೆಗಿನ ವಿತರಣಾ ಕಾಲುವೆ ಸಂ:೯(ಎ), ೧೫, ೧೬, ೧೭ ಮತ್ತು ೧೮ಗಳಲ್ಲಿ ೨೦೨೦ ನ. ೧೮ರಿಂದ ರಿಂದ ೩೦ ರ ವರೆಗೆ ಕಾಲುವೆ ಜಾಲದಲ್ಲಿ ನೀರನ್ನು ನಿಲ್ಲಿಸುವುದು ಹಾಗೂ ೨೦೨೦ ಡಿಸೆಂಬರ್ ೧ ರಿಂದ ಜಲಾಶಯದಲ್ಲಿ ಲಭ್ಯವಿರುವ ೭೧ ದಿನಗಳವರೆಗಿನ ನೀರಾವರಿಗಾಗಿ ಇರುವ ನೀರನ್ನು ಚಾಲು ಬಂದ ಪದ್ದತಿಯಡಿ ೨೦೨೧ರ ಮಾರ್ಚ್ ೨೧ರ ವರೆಗೆ ಕಾಲುವೆ ಜಾಲದಲ್ಲಿ ನೀರನ್ನು ಹರಿಸಲು ನಿರ್ಧರಿಸಲಾಯಿತು.
ಈ ಅವಧಿಯಲ್ಲಿ ಹಿಂಗಾರು ಹಂಗಾಮಿಗೆ ಸೂಕ್ತವಾದ ಅರೆ ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ಸೂಚಿಸಲಾಗಿದೆ.
ಈ ಸಭೆಯಲ್ಲಿ ನಿರ್ಣಯಿಸಿದಂತೆ ಅಚ್ಚುಕಟ್ಟು ಕ್ಷೇತ್ರದಲ್ಲಿ ಬೆಳೆಗಳಾದ ಭತ್ತ, ಕಬ್ಬು ಹಾಗೂ ಬಾಳೆಯ ಬೆಳೆಗಳನ್ನು ನಿಷೇಧಿಸಿ ಲಘು ನೀರಾವರಿ ಹಾಗೂ ಅಲ್ಪಾವಧಿ ಬೆಳೆಗಳನ್ನು ಮಾತ್ರ ಬೆಳೆಯುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತ ಬಾಂಧವರು ಸಹಕರಿಸಿ ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ಮಿತವಾಗಿ ನೀರನ್ನು ಬಳಸಲು ವಿನಂತಿಸಲಾಗಿದೆ.
ಕಾಲುವೆ ಜಾಲದ ನೀರು ನಿರ್ವಹಣೆ ಸಮಯದಲ್ಲಿ ತೂಬಿನ ಗೇಟುಗಳನ್ನು ಕಾಲುವೆ ಕಟ್ಟಡಗಳನ್ನು ರಕ್ಷಿಸುವುದು ಹಾಗೂ ಸೈಫನ್ ಪೈಪಗಳು ಮತ್ತು ಅನಧಿಕೃತ ಪಂಪುಗಳು ಹಾಕುವುದನ್ನು ನಿಷೇಧಿಸಲಾಗಿದೆ. ರೈತಬಾಂದವರು ಚಾಲು/ಬಂದ್ ಪದ್ದತಿಯನ್ನು ಅನುಸರಿಸುವ ಮೂಲಕ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ಹಾಗೂ ಈ ದಿಶೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಸಹಕರಿಸುವಂತೆ ಕೋರಲಾಗಿದೆಂದು ಕೃಭಾಜನಿನಿ.ನಾಬದಂ ಕಾಲುವೆ ವೃತ್ತ ಸಂ.೨, ಕೃಷ್ಣಾಪುರ-೫೮೫ ೩೦೪. ಅಧೀಕ್ಷಕ ಅಭಿಯಂತರ ಲಕ್ಷ್ಮಣ ಎಂ.ನಾಯಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.