ನಾರಾಯಣಪುರ-ಆಲಮಟ್ಟಿ ಜಲಾಶಯದಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಬಿಡುಗಡೆಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ವಿಜಯಪುರ,ಮೇ.12 :ನಾರಾಯಣಪುರ ಜಲಾಶಯದಿಂದ ಐಬಿಸಿ ಹಾಗೂ ಐಎಲ್‍ಐ ಕಾಲುವೆಗಳ ಮೂಲಕ ಮತ್ತು ಆಲಮಟ್ಟಿ ಜಲಾಶಯದಿಂದ ಮುಳವಾಡ ಏತ ನೀರಾವರಿ ಯೋಜನೆ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆಗಳ ಮೂಲಕ ಬಹುಹಳ್ಳಿ ಕುಡಿಯುವ ನೀರಿನ ಕೆರೆಗಳಿಗೆ ಹಾಗೂ ಇತರೆ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ಈ ಅವಧಿಯಲ್ಲಿ ಮುಂಜಾಗ್ರತಾ ಕ್ರಮವಾಗಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ.
ಕುಡಿಯುವ ಉದ್ದೇಶಕ್ಕಾಗಿ ಹಂತ-ಹಂತವಾಗಿ ತುಂಬಿಸಲು ಬಿಡುಗಡೆಗೊಳಿಸಿರುವ ನೀರು ಪೋಲಾಗದಂತೆ ಮಿತವ್ಯಯವಾಗಿ ಬಳಸುವ ಕುರಿತು ಮತ್ತು ನೀರು ನಿಗದಿತ ಅಂತರವನ್ನು ತಲುಪಿಸುವಗೋಸ್ಕರ ಮತ್ತು ಕೆರೆಗಳಲ್ಲಿನ ನೀರನ್ನು ಉಳಿಸಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಕಾಲುವೆಗಳ ಎಡ-ಬಲ 100ಅಡಿ ವ್ಯಾಪ್ತಿಯಲ್ಲಿ ಹಾಗೂ ಕೆರೆಗಳ ಸುತ್ತಲು 100 ಅಡಿ ವ್ಯಾಪ್ತಿಯಲ್ಲಿ ದಿನಾಂಕ : 10-05-2024 ರಿಂದ 31-05-2024ರವರೆಗೆ 144ರನ್ವಯ ನಿಷೇಧಿತ ಪ್ರದೇಶವನ್ನು ಘೋಷಿಸಿ ಆದೇಶಿಸಲಾಗಿದೆ.
ನಿಷೇಧಾಜ್ಞೆ ಸಂದರ್ಭದಲ್ಲಿ ಈ ಕಾಲುವೆ ವ್ಯಾಪ್ತಿಯ ದಡದ ಎಡ-ಬಲ 100 ಅಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಗೂ ಕೆರಗಳ ಸುತ್ತ 100 ಅಡಿಯಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ಓಡಾಡುವುದನ್ನು ನಿಷೇಧಿಸಲಾಗಿದೆ. ಕೆರೆ ಮತ್ತು ಕಾಲುವೆಗಳಿಂದ ಅಕ್ರಮ ಪಂಪಸೆಟ್- ಸೈಫನ್ ಸೋಲಾರ ಮತ್ತು ಡಿಸೇಲ್ ಆಧಾರಿತ ಜನರೇಟರ ಮೂಲಕ ನೀರು ಉಪಯೋಗಿಸಕೂಡದು. ಅಕ್ರಮವಾಗಿ ಪಂಪಸೆಟ್ ಮೂಲಕ ನೀರನ್ನು ಬಳಸುತ್ತಿದ್ದಲ್ಲಿ ಅಂತಹ ಪಂಪಸೆಟ್‍ಗಳ ವಿದ್ಯುತ್ ಸಂರ್ಪಕವನ್ನು ಕಡಿತಗೊಳಿಸಿ ವಶಕ್ಕೆ ಪಡೆಯಲಾಗುವುದು. ನಿಷೇಧಿತ ಪ್ರದೇಶದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದು ನಿಷೇಧಿಸಲಾಗಿದೆ. ಬಿಡುಗಡೆಗೊಳಿಸಲಾಗುತ್ತಿರುವ ನೀರಿನ್ನು ಮಿತವಾಗಿ ಹಾಗೂ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡಬೇಕು. ಸಂಬಂಧಪಟ್ಟ ಕಾಲುವೆ-ಕೆರೆಕಟ್ಟೆಗಳ ಬದು ಹಾನಿಗೊಳಿಸದಂತೆ ನಿಷೇಧಿಸಿದ್ದು, ಹಾನಿಗೊಳಗಾದಲ್ಲಿ ನಿಯಮಾನುಸಾರ ಕ್ರಮ ವಹಿಸಲಾಗುವುದು. ಈ ಆದೇಶವು ಮದುವೆ, ಶವ ಸಂಸ್ಕಾರಗಳು ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.