ನಾರಾಯಣದೇವರ ಕೆರೆ, ಮರಿಯಮ್ಮನಹಳ್ಳಿ ಕಲಾವಿದರುಗಳ ನೆಲೆ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ , ಆ.01:  ನಾರಾಯಣದೇವರ ಕೆರೆ ಮತ್ತು  ಮರಿಯಮ್ಮನಹಳ್ಳಿ  ಕಲಾವಿದರ ನೆಲೆಯಾಗಿತ್ತು ಅಂತ ಕೇಳಿದ್ದೆವು, ಆದರೆ ಅದು ಇಂದು ಸಾಬೀತಾಗಿದೆ ಎಂದು ಲವ್ 360 ಚಿತ್ರದ ನಿರ್ದೇಶಕ ಶಶಾಂಕ್ ಹೇಳಿದರು.
ಅವರು ಮರಿಯಮ್ಮನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಭಾನುವಾರ ನಡೆದ ಲವ್ 360 ಸಿನಿಮಾ ಪ್ರಚಾರದ ರೋಡ್ ಶೋನ ನಂತರದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಕನ್ನಡ ಚಿತ್ರರಂಗಕ್ಕೆ ಮರಿಯಮ್ಮನಹಳ್ಳಿಯಿಂದ ಸಾಕಷ್ಟು ಕಲಾವಿದರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಕಲಾವಿದರ ಜೊತೆಗೆ ಕಲಾ ರಸಿಕರು ಇರುವ ಭಾಗದಲ್ಲಿ ಕಲಾ ದೇವತೆ ಅರಳುತ್ತದೆ ಎನ್ನುವುದಕ್ಕೆ ಸಿನಿಮಾ ರೋಡ್ ಶೋ ಸಾಕ್ಷಿಯಾಗಿದೆ. ಕಲಾವಿದರ ನಾಡಿನಿಂದ ಬಂದ ನಮ್ಮ ಚಿತ್ರದ ನಾಯಕ ನಟ ಡಾ.ಪ್ರವೀಣ್ ಕೂಡ ಉತ್ತಮ ಕಲಾವಿದರಾಗಿದ್ದಾರೆ. ಇವರು ಚಿತ್ರರಂಗಕ್ಕೆ ಹೊಸಬರಾಗಿದ್ದರೂ ಕೂಡ ಮಾಗಿದ ಕಲಾವಿದರಂತೆ ಪರಿಪಕ್ವತೆಯಿಂದ ಅಭಿನಯಿಸಿದ್ದಾರೆ. ಇವರಿಗೆ ಇನ್ನಷ್ಟು ಅವಕಾಶಗಳು ಚಿತ್ರರಂಗದಲ್ಲಿ ಸಿಗಲಿ. ಹೆಚ್ಚಿನ ಕಲಾವಿದರಿಗೆ ಕನ್ನಡ ಹಿರಿ ತೆರೆಯಲ್ಲಿ ಅಭಿನಯಿಸುವ ಅವಕಾಶ ಸಿಗಲಿ ಎಂದು ಹಾರೈಸಿದರು.
ಚಿತ್ರದ ನಾಯಕನಟ ಡಾ.ಪ್ರವೀಣ್ ಮಾತನಾಡಿ, ಚಿತ್ರದಲ್ಲಿ ನಟಿಸುವ ನನ್ನ ಬಾಲ್ಯದ ಕನಸು, ನನಸಾಗುತ್ತಿದೆ. ಚಿತ್ರರಂಗದಲ್ಲಿ ನನಗೆ ಯಾವುದೇ ಅವಮಾನಗಳಾಗಿಲ್ಲ. ನನ್ನ ಊರಿನ ಜನ ಪ್ರೀತಿಯಿಂದ ಸ್ವಾಗತಿಸಿ, ಹರಸಿದ್ದೀರಿ ನಿಮ್ಮ ಅಭಿಮಾನ ಹೀಗೆ ಸದಾ ನನ್ನ ಮೇಲೆ ಇರಲಿ. ಚಿತ್ರ ಚೆನ್ನಾಗಿ ಮೂಡಿಬಂದಿದೆ, ಕುಟುಂಬ ಸಮೇತ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ಚಿತ್ರದ ನಾಯಕ ನಟಿ ರಚನಾ ಇಂದೆರಾ,  ನಿರ್ಮಾಪಕಿ ಮಂಜುಳಾ ಮೂರ್ತಿ, ಡಾ.ಪ್ರದೀಪ್ ಮಾತನಾಡಿದರು.  ವೇದಿಕೆಯಲ್ಲಿ ರಂಗನಟ, ನಿರ್ದೇಶಕ ಮ.ಬ.ಸೋಮಣ್ಣರವರನ್ನು ಚಿತ್ರ ತಂಡ ಗೌರವಿಸಿತು.
ಈ ಸಂದರ್ಭದಲ್ಲಿ ಎಲ್.ಪರಮೇಶ್ವರ್, ಚಿದ್ರಿ ಸತೀಶ್, ಗುಂಡಾಸ್ವಾಮಿ, ಎ.ರಹೀಮಾನ್, ವಿನಾಯಕ, ಭರತ್ ಜೈನ್, ಸಂದೀಪ್, ರವಿ, ಸಂತೋಷ ಜೈನ್, ಪ.ಪಂ.ಸದಸ್ಯರಾದ ಬೆಣಕಲ್ ಬಾಷ, ಕುಸುಮ ರಮೇಶ ಸೇರಿದಂತೆ ಇತರರಿದ್ದರು. ಇದಕ್ಕೂ ಮುನ್ನ ಪಟ್ಟಣದ ಎ.ಪಿ.ಎಂ.ಸಿ.ಯಿಂದ ಮುಖ್ಯ ರಸ್ತೆಯಲ್ಲಿ ಪ.ಪಂ. ಕಛೇರಿಯವರೆಗೆ ಲವ್ 360 ಚಿತ್ರ ತಂಡದಿಂದ ಪ್ರಚಾರ ನಡೆಯಿತು. ಕಾರ್ಯಕ್ರಮವನ್ನು ಪಿ. ರಾಮಚಂದ್ರ ನಿರ್ವಹಿಸಿದರು.

Attachments area