ನಾರಂಜಾ ಕಾರ್ಖಾನೆ ಮುಚ್ಚಿದರೆ ಖಂಡ್ರೆ ಹೊಣೆ

ಬೀದರ್:ಸೆ.14: ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್‍ಎಸ್‍ಎಸ್‍ಕೆ) ಒಂದು ವೇಳೆ ಮುಚ್ಚಿದರೆ ಅದಕ್ಕೆ ನೀವೇ ನೇರ ಹೊಣೆಗಾರರಾಗಬೇಕಾಗುತ್ತದೆ’ ಎಂದು ಎನ್‍ಎಸ್‍ಎಸ್‍ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಅವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕಾರ್ಖಾನೆಯು ಬ್ಯಾಂಕ್‍ನಿಂದ ಪಡೆದ ಸಕ್ಕರೆ ಮೇಲಿನ ಸಾಲ ದುರುಪಯೋಗ ಪಡಿಸಿಕೊಂಡಿಲ್ಲ. ಸಾಧ್ಯವಾದಷ್ಟು ಬಡ್ಡಿ ಮರುಪಾವತಿ ಮಾಡುತ್ತ ಬರಲಾಗಿದೆ. ಕಾರ್ಖಾನೆ ನಡೆಸಿಕೊಂಡು ಹೋಗುವುದೇ ದೊಡ್ಡ ಸವಾಲಾಗಿದೆ. ಸಾಲದ ದುರುಪಯೋಗ ಮಾಡಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ ಎಂದು ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದಾರೆ.
ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ನನ್ನ ವಿರುದ್ಧ ಕ್ರಮ ಕೈಗೊಳ್ಳಬೇಕೆನ್ನುವುದು ಹಾಸ್ಯಾಸ್ಪದ. ತಮ್ಮ ಸಹೋದರ ಅಮರ್ ಖಂಡ್ರೆ ಕೂಡ ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆ ನಡೆಸಿಕೊಂಡು ಹೋಗುತ್ತಿದ್ದಾರೆ. ಅಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅಮರ್ ಖಂಡ್ರೆ ಅವರು ಬ್ಯಾಂಕ್‍ನಿಂದ ಎನ್‍ಪಿಎ ಆದ ಮೇಲೆ ಸುಮಾರು 70 ಸಾವಿರ ಕ್ವಿಂಟಲ್ ಸಕ್ಕರೆ ಬ್ಯಾಂಕ್‍ನವರ ಗಮನಕ್ಕೆ ತರದೇ ಮಾರಾಟ ಮಾಡಿಕೊಂಡಿರುವ ಆರೋಪಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಎರಡೂ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ನಾನು ಯಾವುದೇ ರೀತಿಯ ತನಿಖೆಗೂ ಸಿದ್ಧನಿದ್ದೇನೆ. ಡಿಸಿಸಿ ಬ್ಯಾಂಕ್ ಚುನಾವಣೆ ಇರುವುದರಿಂದ ಅಮರ್ ಖಂಡ್ರೆ ಮಾತಿಗೆ ಮರುಳಾಗಿ ತಾವು ಯಾವುದೇ ರೀತಿಯ ಕಿರುಕುಳ ನೀಡಿದರೆ ಈ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚಿದರೆ ಅದಕ್ಕೆ ತಾವೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಎನ್‍ಸಿಡಿಸಿಯಿಂದ ಸಹಕಾರಿ ಸಕ್ಕರೆ ಕಾರ್ಖಾನೆಗಳ ಉಳಿವಿಗಾಗಿ ?10 ಸಾವಿರ ಕೋಟಿ ಸಾಲ ನೀಡಲು ಮುಂದೆ ಬಂದಿದೆ. ಅದಕ್ಕೆ ಸಹಕರಿಸಬೇಕು. ಈಗಾಗಲೇ ಬಿಎಸ್‍ಎಸ್‍ಕೆ ಆರ್ಥಿಕ ಸಂಕಷ್ಟದಿಂದ ಮುಚ್ಚಿ ಹೋಗಿದೆ. ಜಿಲ್ಲೆಯ ರೈತರ ಹಿತವನ್ನು ನೋಡಬೇಕು. ತಮ್ಮ ಸಹೋದರನನ್ನು ಮಾತ್ರ ನೋಡದೆ ಇಡೀ ಸಹಕಾರ ವ್ಯವಸ್ಥೆ ಬಲಪಡಿಸಬೇಕು. ಅನಗತ್ಯ ಕಿರುಕುಳ ನೀಡಿ ವಿವಾದ ಸೃಷ್ಟಿಸಿದರೆ ಸಾರ್ವಜನಿಕರು, ರೈತರು ನಿಮ್ಮ ಮನೆಯ ಮುಂದೆ ನಿತ್ಯ ಧರಣಿ ಮಾಡುವ ಪರಿಸ್ಥಿತಿ ತಂದುಕೊಳ್ಳಬಾರದು ಎಂದು ಎಚ್ಚರಿಕೆಯ ಧಾಟಿಯಲ್ಲಿ ತಿಳಿಸಿದ್ದಾರೆ.