ನಾಯ್ಡುರಿಂದ ಸಾಕ್ಷ್ಯ ನಾಶ

ಹೈದರಾಬಾದ್, ಸೆ.೧೦- ಆಂದ್ರಪ್ರದೇಶದ ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ನೂರಾರು ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಾಕ್ಷ್ಯ ನಾಶ ಪಡಿಸಿದ್ದಾರೆ ಎಂದು ಸಿಐಡಿ ಹೇಳಿದೆ.
ನಿಗಮದಲ್ಲಿ ನೂರಾರು ಕೋಟಿ ರೂಪಾಯಿ ವಂಚನೆ ಆಗಿರುವುದನ್ನು ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯ ಪತ್ತೆ ಹಚ್ಚಿದ ನಂತರ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ನಿನ್ನೆ ಬೆಳ್ಳಂಬೆಳಗ್ಗೆ ಬಂಧಿಸಲಾಗಿತ್ತು. ಈ ನಡುವೆ ಸಿಐಡಿ ಸಾಕ್ಷ್ಯ ನಾಶ ಆರೋಪ ಮಾಡಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ಪಡೆದುಕೊಂಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಅಚ್ಚಂನಾಯ್ಡು ಅವರನ್ನು ಪ್ರಕರಣದಲ್ಲಿ ಎರಡನೇ ಆರೋಪಿ ಎಂದು ಹೆಸರಿಸಲಾಗಿದ್ದು ಅವರನ್ನು ಶೀಘ್ರದಲ್ಲೇ ಸಿಐಡಿ ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
೨೦೧೮ರ ಮೇ ೧೪, ೨೦೧೮ ರಂದು, ಪುಣೆಯ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯ ಕಚೇರಿಯಿಂದ ರಾಜ್ಯ ಭ್ರಷ್ಟಾಚಾರ ವಿರೋಧಿ ಬ್ಯೂರೋ, ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ಆಗಿರುವ ವಂಚನೆ ಬಗ್ಗೆ ಮಾಹಿತಿ ನೀಡಿತ್ತು. ನಕಲಿ ಇನ್‌ವಾಯ್ಸ್‌ಗಳ ಮೂಲಕ ವಿವಿಧ ಶೆಲ್ ಕಂಪನಿಗಳಿಗೆ ಎಪಿಎಸ್‌ಎಸ್‌ಡಿಸಿ ಹಣವನ್ನು ರವಾನಿಸಲಾಗಿದೆ ಎಂದು ತಿಳಿಸಿತ್ತು.
ಹೆಚ್ಚುವರಿಯಾಗಿ, ಸ್ಕಿಲ್ಲರ್ ಎಂಟರ್‍ಪ್ರೈಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಡಿಸೈನ್‌ಟೆಕ್ ಹಗರಣದ ಕೇಂದ್ರದಂತಹ ಕಂಪನಿಗಳು ಸರಕು ಸೇವಾ ತೆರಿಗೆ ಪಾವತಿಸದೆ ಕೇಂದ್ರ ವ್ಯಾಟ್ ಕ್ಲೈಮ್ ಮಾಡಿದ ಆರೋಪವಿದೆ. ಜಿಎಸ್‌ಟಿ ಅಧಿಕಾರಿಗಳು ೨೦೧೭ ರಲ್ಲಿ ಹವಾಲಾ ಮಾರ್ಗಗಳ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ ಎನ್ನುವ ವಿಷಯ ಪತ್ತೆ ಮಾಡಿತ್ತು.
ಆಗ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಎಸಿಬಿ ತನಿಖೆಗೆ ಆದೇಶಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಐಡಿ ಹೇಳಿಕೊಂಡಿದೆ.
“ಈ ಬಗ್ಗೆ ತಿಳಿದ ನಂತರವೂ ಎಪಿಎಸ್‌ಎಸ್‌ಡಿಸಿ ಹಣ ದುರುಪಯೋಗವಾಗುವುದನ್ನು ತಡೆಯಲು ಯಾವುದೇ ಕ್ರಿಮಿನಲ್ ಕ್ರಮ ಅಥವಾ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಂಡಿಲ್ಲ” ಎಂದು ಆರೋಪಿಸಿದೆ.
ಎಪಿಎಸ್‌ಎಸ್‌ಡಿಸಿಯ ಎಂಡಿ ಮತ್ತು ಸಿಇಒ, ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳ ಮೂಲಕ ಸಾಕ್ಷ್ಯಾಧಾರಗಳ ಕಣ್ಮರೆಯಾಗುವಂತೆ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಹಲವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ಸಿಐಡಿ ತಿಳಿಸಿದೆ.