ನಾಯಿಯನ್ನು ಹೊತ್ತೊಯ್ದ ಚಿರತೆ

ಪಿರಿಯಾಪಟ್ಟಣ: ಏ.26: ತಾಲೂಕಿನ ಹರದೂರು ಗ್ರಾಮದ ಹೊರವಲಯದ ಸೋಮೇಶ್ವರ ದೇವಸ್ಥಾನ ಬಳಿ ಇರುವ ಗ್ರಾ.ಪಂ ಸದಸ್ಯೆ ವೀಣಾ ದಿವಾಕರ್ ಎಂಬುವರ ತೋಟದ ಮನೆಯಲ್ಲಿ ಸಾಕಿದ್ದ ನಾಯಿಯನ್ನು ಚಿರತೆ ದಾಳಿ ಮಾಡಿ ಕೊಂದು ಹೊತ್ತೊಯ್ದ ಘಟನೆ ಶನಿವಾರ ರಾತ್ರಿ ಸಮಯ ಜರುಗಿದೆ.
ಚಿರತೆ ಸಾಕು ನಾಯಿಯ ಮೇಲೆ ದಾಳಿ ಮಾಡಿ ಕೊಂದು ಹೊತ್ತೊಯ್ದಿರುವ ವಿಡಿಯೋ ವೀಣಾ ದಿವಾಕರ್ ಅವರ ಮಕ್ಕಳ ಮೊಬೈಲ್ ನಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ, ಶನಿವಾರ ರಾತ್ರಿ ವೇಳೆ ತೋಟದ ಮನೆಯಿಂದ ಹೊರಗೆ ಹೋಗುವಾಗ ವೀಣಾ ದಿವಾಕರ್ ಅವರ ಮಕ್ಕಳು ಚಿರತೆ ದಾಳಿ ಬಗ್ಗೆ ಅನುಮಾನಗೊಂಡು ಅವರ ಮೊಬೈಲನ್ನು ಟ್ರಾನ್ಸ್ ಫಾರ್ಮರ್ ಪೆಟ್ಟಿಗೆ ಮೇಲೆ ಇಟ್ಟು ಹೋಗಿದ್ದ ವೇಳೆ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿದೆ.
ಈ ಹಿಂದೆಯು ಸಹ ವೀಣಾ ದಿವಾಕರ್ ಅವರ ಮೂರು ಸಾಕು ನಾಯಿಗಳು ಚಿರತೆ ದಾಳಿಯಿಂದ ಸಾವನ್ನಪ್ಪಿದ್ದು ಈ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ರೀತಿ ಕ್ರಮ ಕೈಗೊಂಡಿರದ ಕಾರಣ ಸೂಕ್ತ ಪರಿಹಾರ ನೀಡಬೇಕು ಹಾಗೂ ಘಟನೆಯಿಂದ ಸ್ಥಳೀಯರು ಭಯಭೀತರಾಗಿದ್ದು ತಮ್ಮ ಜಮೀನುಗಳಿಗೆ ಹೋಗಲು ಹೆದರುತ್ತಿರುವ ಕಾರಣ ಚಿರತೆ ಸೆರೆ ಹಿಡಿಯಲು ಬೋನ್ ಇಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಘಟನೆ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಸ್ಥಳೀಯರಿಂದ ಮಾಹಿತಿ ಪಡೆದು ಚಿರತೆ ಸೆರೆ ಹಿಡಿಯಲು ಬೋನ್ ಅಳವಡಿಸಿದ್ದಾರೆ.